ಹೊಸನಗರ: ವ್ಯಕ್ತಿಗೆ ಹಲ್ಲೆ; ಗಲಾಟೆ ವಿಡಿಯೋ ವೈರಲ್, ಪ್ರಕರಣ ದಾಖಲು

ಹೊಸನಗರ: ಹೊಸ ವರ್ಷದ ಸಂಭ್ರಮದ ದಿನದಂದೇ ನಡುವೆ ಪಟ್ಟಣದಲ್ಲಿ ನಡೆದ ಗಲಾಟೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಈಡಿಗರ ಭವನದ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಸುರೇಂದ್ರ ಕೋಟ್ಯಾನ್, ಗೋಪಾಲ, ಸಂತೋಷ, ಶಶಾಂಕ, ಸುರೇಶ ಸ್ವಾಮಿರಾವ್ ಸೇರಿದಂತೆ ಐವರ ಮೇಲೆ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಜನವರಿ 1ರಂದು ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮಾಧವಶೆಟ್ಟಿ ಎಂಬವರು ಪಟ್ಟಣದ ಪೇಟೆ ಸಮೀಪ ತಮ್ಮ ವಾಹನವನ್ನು ನಿಧಾನಗೊಳಿಸಿದಾಗ, ಅಲ್ಲಿದ್ದ ಆರೋಪಿಗಳು ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಮಾಧವಶೆಟ್ಟಿಯವರ 55 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಜಖಂಗೊಂಡಿದ್ದು, ಕುತ್ತಿಗೆಯಲ್ಲಿದ್ದ ಚಿನ್ನದ ಸರವೂ ಕಳೆದುಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಗೊಳಗಾದ ಮಾಧವಶೆಟ್ಟಿ ಅವರು ತಮಗೆ ನ್ಯಾಯ ಒದಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.







