ರಾಜ್ಯದ ಮೊದಲ ಕೇಬಲ್ ಆಧಾರಿತ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಜು.14ಕ್ಕೆ ಲೋಕಾರ್ಪಣೆ

ಶಿವಮೊಗ್ಗ: ದೇಶದ ಎರಡನೇ ಅತಿ ಉದ್ದದ ಕೇಬಲ್ ಬ್ರಿಡ್ಜ್, ರಾಜ್ಯದ ಮೊದಲ ಕೇಬಲ್ ಆಧಾರಿತ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ಅಧಿಕೃತವಾಗಿ ದಿನಾಂಕ ನಿಗದಿಯಾಗಿದೆ. ಜುಲೈ 14ರಂದು ಸೇತುವೆ ಲೋಕಾರ್ಪಣೆಗೊಳ್ಳಲಿದೆ.
ಶನಿವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಅವರು, ನಾಡಿಗೆ ಬೆಳಕು ನೀಡಲು ತ್ಯಾಗ ಮಾಡಿದ ಶರಾವತಿ ಹಿನ್ನೀರು ಭಾಗದ ಜನರಿಗೆ ಸೇತುವೆ ತುಂಬಾ ಅವಶ್ಯಕತೆ ಇತ್ತು. ಹೀಗಾಗಿ 470 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ ಎಂದರು.
ಜುಲೈ 14ರಂದು ಭಾರತದ ಎರಡನೇ ಅತಿ ಉದ್ದದ ಈ ಸೇತುವೆಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಆಗಮಿಸಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಅಧಿಕಾರಿಗಳು ಮಾತುಕತೆ ನಡೆಸಿ ಕಾರ್ಯಕ್ರಮಕ್ಕೆ ಸದ್ಯದಲ್ಲೇ ಸ್ಥಳ ನಿಗದಿಪಡಿಸಲಿದ್ದಾರೆ ಎಂದರು.
ಸೇತುವೆಯ ಮೊದಲ ಹಂತದ ಲೋಡ್ ಟೆಸ್ಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಎರಡನೇ ಹಂತದ ಟೆಸ್ಟಿಂಗ್ ಶುಕ್ರವಾರ ನಡೆಯಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಿಂದ ಮುಂದೂಡಲ್ಪಟ್ಟಿತ್ತು. ಎರಡನೇ ಹಂತದ ಲೋಡ್ ಟೆಸ್ಟಿಂಗ್ ಶನಿವಾರ(ಇಂದು) ನಡೆಸಲಾಗುತ್ತಿದೆ ಎಂದರು.
ಸಿಗಂದೂರು ಚೌಡೇಶ್ವರಿ ಸೇತುವೆ:
ಸರಕಾರಿ ಆದೇಶದಲ್ಲಿ ಈ ಸೇತುವೆಯನ್ನು ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಕರೆಯಲಾಗುತ್ತಿದೆ. ಆದರೆ, ಈ ಸೇತುವೆಗೆ ‘ಸಿಗಂದೂರು ಚೌಡೇಶ್ವರಿ ಸೇತುವೆ’ ಎಂದು ನಾಮಕರಣ ಮಾಡಬೇಕು. ಈ ಸಂಬಂಧ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸವನ್ನು ಕೇಂದ್ರದಲ್ಲಿ ಮಾಡುತ್ತೇನೆ ಎಂದರು.