ಶಿವಮೊಗ್ಗ | ತೋಟದ ಮಾಲೀಕನಿಂದ ಕೂಲಿ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಶಿವಮೊಗ್ಗ: ತೋಟದ ಮಾಲಕರೊಬ್ಬರು ತಮ್ಮ ಕಾರ್ಮಿಕರನ್ನು ವಿಮಾನದಲ್ಲಿ ಗೋವಾಗೆ ಪ್ರವಾಸ ಕರೆದೊಯ್ಯುವ ಮೂಲಕ ಅವರ ಆಸೆಯನ್ನು ಈಡೇರಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮಂಗಳವಾರ ಹತ್ತು ಮಹಿಳೆಯರು ತಮ್ಮ ತೋಟದ ಮಾಲಕ ವಿಶ್ವನಾಥ್ ಅವರೊಂದಿಗೆ ಗೋವಾಗೆ ಸ್ಟಾರ್ ಏರ್‌ಲೈನ್ಸ್‌ನ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿರಿಗಾನಹಳ್ಳಿಯ ರೈತ ವಿಶ್ವನಾಥ್ ತಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದಿದ್ದಾರೆ. ಒಮ್ಮೆಯಾದರೂ ವಿಮಾನದಲ್ಲಿ ಹಾರಬೇಕು ಎಂಬುದು ಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಬಯಕೆಯಾಗಿತ್ತು. ಈ ಆಸೆಯನ್ನು ವಿಶ್ವನಾಥ್ ಈಡೇರಿಸಿದ್ದಾರೆ. ಗೋವಾದಲ್ಲಿ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಬೀಚ್‌ನಲ್ಲಿ ಮನೋರಂಜನೆ ಪಡೆಯಲಿದ್ದಾರೆ.
ನಾನು ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ನಮ್ಮನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಎಂದಿದ್ದರು. ತಿರುಪತಿಗೆ ಹೋಗಿ ಬರುವ ಯೋಜನೆ ಇತ್ತು. ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದ್ದ ಕಾರಣ ಅವಕಾಶ ಸಿಗಲಿಲ್ಲ. ಈಗ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಫೆ.20ರಂದು ವಿಮಾನದಲ್ಲಿ ಶಿವಮೊಗ್ಗಕ್ಕೆ ಹಿಂತಿರುಗಲಿದ್ದೇವೆ.
-ವಿಶ್ವನಾಥ್, ತೋಟದ ಮಾಲಕ







