ಡಿಕೆಶಿ ಸಂಪುಟದಲ್ಲಿ ಮಧು ಬಂಗಾರಪ್ಪಗೆ ಸ್ಥಾನ: ಶಿವಮೊಗ್ಗ ನಾಯಕನಿಗೆ ಒಲಿದ ಮಂತ್ರಿ ಗಿರಿ

ಶಿವಮೊಗ್ಗ : ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಮಧುಬಂಗಾರಪ್ಪ ಅವರು, ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿಯೂ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
4/9/1966ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಹಾಗೂ ಶಂಕುತಲಾ ಬಂಗಾರಪ್ಪ ದಂಪತಿಗಳ ಪುತ್ರರಾಗಿ ಜನಿಸಿದರು. ರಾಜಕೀಯ ಹೊರತುಪಡಿಸಿ, ಚಲನಚಿತ್ರ ನಟರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2013ರ ವಿಧಾನ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧುಬಂಗಾರಪ್ಪ ಅವರು, ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲನ್ನು ಅನುಭವಿಸಿದರು.
2019 ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು 506512 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ದ ಸೋಲನ್ನು ಕಂಡಿದ್ದರು.
2021ರ ಜುಲೈ 30ರಂದು ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಮುಂತಾದ ನಾಯಕರ ಸಮ್ಮುಖದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕ 2022 ರಲ್ಲಿ ಕೆಪಿಸಿಸಿ ಒಬಿಸಿ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕವಾದರು. ಬಳಿಕ ಎಐಸಿಸಿ ಸದಸ್ಯರಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2023ರ ವಿಧಾನ ಸಭಾ ಚುನಾವಣೆ ವೇಳೆ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸಹೋದರ, ಬಿಜೆಪಿಯ ಕುಮಾರ್ ಬಂಗಾರಪ್ಪ ವಿರುದ್ಧ ಸ್ಪರ್ಧಿಸಿ 44,262 ಮತಗಳ ಅಂತರದಿಂದ ಜಯಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಈಡಿಗ ಸಮುದಾಯದ ಪ್ರಾತಿನಿಧ್ಯದ ಅಡಿಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ದೊರೆಯಿತು.
ಸಿದ್ದರಾಮಯ್ಯ ಸಂಪುಟದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು.






