13 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಪ್ರಕಟ : ಸಚಿವ ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿಗೆ ಸರಕಾರ ನಿರ್ಧರಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 23 ರಿಂದ ನವೆಂಬರ್ 9 ರವರೆಗೆ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 7ರಂದು ಟಿಇಟಿ ಪರೀಕ್ಷೆ ನಡೆಸಿ, ಡಿಸೆಂಬರ್ 31ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 4780 ಶಿಕ್ಷಕರನ್ನು ನೇಮಕಾತಿ ಮಾಡಿದ್ದರು. ನಾನು ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಪ್ರಥಮ ವರ್ಷದಲ್ಲಿ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಈಗ ಮತ್ತೆ 13 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದೇವೆ. ಕಳೆದ ಎರಡೂವರೆ ವರ್ಷದಲ್ಲಿ 26 ಸಾವಿರ ಶಿಕ್ಷಕರ ನೇಮಕಾತಿ ಮಾಡಿದಂತಾಗುತ್ತದೆ ಎಂದರು.
ಶೀಘ್ರದಲ್ಲಿ ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿಗೂ ಸರಕಾರ ಆದೇಶ ಹೊರಡಿಸಲಿದೆ. ರಾಜ್ಯದಲ್ಲಿ 800 ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಲಾಗುವುದು. 6ನೇ ತರಗತಿಯಿಂದ ಕನ್ನಡದ ಜೊತೆ ಇಂಗ್ಲಿಷ್ ಕಲಿಕೆಗೂ ಅವಕಾಶವಿರಲಿದೆ. ಕರ್ನಾಟಕ ಪಬ್ಲಿಕ್ ಶಾಲೆಗೆ 3 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಎಐ ಆಧಾರಿತ ಶಿಕ್ಷಣ ನೀಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈಗ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಸಲಾಗುವುದು. 6ನೇ ತರಗತಿಯಿಂದಲೇ ಸ್ಕಿಲ್ ಸ್ಕೂಲ್ ಪ್ರಾರಂಭಿಸಲಾಗುವುದು ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಜಾತಿ ಸಮೀಕ್ಷೆ ಶೇ.90.12ರಷ್ಟು ಆಗಿದೆ, ಸಮೀಕ್ಷೆ ಅಗತ್ಯ ತುಂಬಾ ಇದೆ. ಇದರಿಂದ ಬಜೆಟ್ಗೆ ಅನುಕೂಲವಾಗಲಿದೆ. ದೊಡ್ಡ ದೊಡ್ಡ ಉದ್ಯಮಿಗಳು ಸಹ ಸಹಕಾರ ನೀಡಬೇಕಾಗುತ್ತದೆ ಎಂದು ಇನ್ಫೋಸಿಸ್ ಹೆಸರನ್ನು ಬಳಸದೆ ಮನವಿ ಮಾಡಿದರು.
ಆರೆಸ್ಸೆಸ್ ಚಟುವಟಿಕೆ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಚಡ್ಡಿಯಿಂದ ಪ್ಯಾಂಟ್ಗೆ ಬದಲಾಗಿದೆ, ಆದರೆ ಅಜೆಂಡಾ ಮಾತ್ರ ಬದಲಾಗಿಲ್ಲ, ಆರೆಸ್ಸೆಸ್ ಹಾದಿ ತಪ್ಪಿಸುವ ವ್ಯವಸ್ಥೆ ಆಗಿದೆ ಎಂದು ಹೇಳಿದರು.







