ಎಸ್.ಬಂಗಾರಪ್ಪರ ಒಡನಾಡಿಗಳಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಚಿವರೊಂದಿಗೆ ವಿಮಾನ ಯಾನ ಭಾಗ್ಯ!
ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ತನ್ನ ಹುಟ್ಟುಹಬ್ಬದ ಪ್ರಯುಕ್ತ ಮಾ.2ರಂದು ತಂದೆ ಎಸ್.ಬಂಗಾರಪ್ಪರ ಜೊತೆಗಿದ್ದ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ಯುವ ಮೂಲಕ ವಿಶೇಷವಾಗಿ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು.
ತಂದೆ ಎಸ್. ಬಂಗಾರಪ್ಪರ 38 ಒಡನಾಡಿಗಳೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಚಿವ ಮಧು ಬಂಗಾರಪ್ಪ ವಿಮಾನದಲ್ಲಿ ಪ್ರಯಾಣಿಸಿದರು. ಆ ಮೂಲಕ ಅವರ ಕನಸು ನನಸಾಗಿಸಿದರು.
ವಿಮಾನದಲ್ಲಿ ಬಂಗಾರಪ್ಪರ ಒಡನಾಡಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಕೆಲವರು ಸಚಿವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. 38 ಮಂದಿಯನ್ನು ಬೆಂಗಳೂರಿನ ವಿವಿಧೆಡೆ ಸುತ್ತಾಡಿಸಿ, ಅಲ್ಲಿನ ಚಿತ್ರಣವನ್ನು ತೋರಿಸಿ ಬಳಿಕ ಶಿವಮೊಗ್ಗಕ್ಕೆ ಪುನಃ ವಿಮಾನದಲ್ಲಿ ವಾಪಸ್ ಕರೆದುಕೊಂಡು ಬರಲಿದ್ದಾರೆ.
ಇದೇ ವೇಳೆ ಮಾತನಾಡಿದ ಬಂಗಾರಪ್ಪರ ಅನುಯಾಯಿಯೊಬ್ಬರು, ಬಂಗಾರಪ್ಪನವರು ಈ ಹಿಂದೆ ಬೆಂಗಳೂರು, ದಿಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ಇದೀಗ ಅವರ ಮಗ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, ಸುಮಾರು 38 ಮಂದಿ ನಮ್ಮ ತಂದೆ ಬಂಗಾರಪ್ಪರ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದೇನೆ. ನಾವು ಇಂದು ಕಾರಿನಲ್ಲಿ ಓಡಾಡುತ್ತಾ, ವಿಮಾನ ಹತ್ತಿದ್ದೇವೆ ಎಂದಾದರೆ ಅದು ಬಂಗಾರಪ್ಪರ ಅನುಯಾಯಿಗಳಿಂದಾಗಿ. ಹಾಗಾಗಿ ಏನಾದರೂ ಅವರಿಗೆ ಮಾಡಬೇಕು ಎಂದು ಈ ವಿಮಾನದ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದ್ದಾರೆ.