ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ : ಶಾಸಕ ಗೋಪಾಲಕೃಷ್ಣ ಬೇಳೂರು

ಗೋಪಾಲಕೃಷ್ಣ ಬೇಳೂರು
ಸಾಗರ : ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿಹೆಚ್ಚು ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸರಕಾರ ಚೆನ್ನಾಗಿ ನಡೆಯಬೇಕು ಎನ್ನುವುದು ನನ್ನ ಅಭಿಲಾಷೆ. ಸರಕಾರ ಜನಪರವಾಗಿ ಕೆಲಸ ಮಾಡಬೇಕು. ನನಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಹಕ್ಕೊತ್ತಾಯ ಮಂಡಿಸಿದ್ದೇನೆ. ಈಡಿಗ ಸಮುದಾಯದ ಪ್ರಮುಖರು ನನಗೆ ಸಚಿವ ಸ್ಥಾನ ಕೊಡಿ ಎಂದು ಪಕ್ಷದ ಮೇಲೆ ಒತ್ತಡ ಹೇರಬೇಕು ಎಂದು ನಾನು ಒತ್ತಾಯಿಸುವುದಿಲ್ಲ. ಒತ್ತಡ ತರುವುದು ಬಿಡುವುದು ಅವರಿಗೆ ಬಿಟ್ಟಿದ್ದು, ಒಟ್ಟಾರೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಪುನರುಚ್ಚರಿಸಿದ ಅವರು, ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು.
ರಸ್ತೆ ಅಭಿವೃದ್ಧಿಗೆ ಹಣ ಇದೆ. ಆದರೆ ಮಳೆಯಿಂದಾಗಿ ಅಭಿವೃದ್ಧಿಗೆ ತೊಡಕಾಗಿದೆ. ಸಾಗರ ಮತ್ತು ಹೊಸನಗರ ಭಾಗದಲ್ಲಿ ರಸ್ತೆ ಗುಂಡಿ ಮುಚ್ಚಲು 5 ಕೋಟಿ ರೂ. ಮೀಸಲಿರಿಸಿದ್ದು ಟೆಂಡರ್ ಕರೆಯಲಾಗಿದೆ. ಮಾರ್ಕೆಟ್ ರಸ್ತೆ ಅಗಲೀಕರಣ ಸಹ ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಮಾರಿಕಾಂಬಾ ಜಾತ್ರೆ ಸಮೀಪಿಸುತ್ತಿರುವುದರಿಂದ ಶಿವಪ್ಪನಾಯಕ ವೃತ್ತದಿಂದ ದುರ್ಗಾಂಬಾ ವೃತ್ತದವರೆಗೆ ಡಾಂಬರೀಕರಣ ಮಾಡಲು ಯೋಚಿಸಲಾಗಿದೆ. ಉಪವಿಭಾಗೀಯ ಆಸ್ಪತ್ರೆಗೆ 1.80 ಕೋಟಿ ರೂ., ತಾಯಿ ಮಗು ಆಸ್ಪತ್ರೆಗೆ 1.70 ಕೋಟಿ ರೂ. ಅಭಿವೃದ್ಧಿಗೆ ಹಣ ಮಂಜೂರು ಮಾಡಿದೆ. ಸಾಗರ ಸಬ್ ಜೈಲನ್ನು 1.70 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಇನ್ನೊಂದು ಭಾಗದ ಗೋಡೆ ಶಿಥಿಲಗೊಂಡಿದ್ದು ಅದರ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಸಾಗರದಲ್ಲಿ ಟ್ರಾಫಿಕ್ ಠಾಣೆ, ತುಮರಿಯಲ್ಲಿ ಪೊಲೀಸ್ ಉಪ ಠಾಣೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಸಾಗರ ಠಾಣೆ ಸ್ಥಳಾಂತರಿಸಿ ಹೊಸ ಕಟ್ಟಡ ಕಟ್ಟಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನನಗೆ ಸಚಿವ ಸ್ಥಾನ ಕೊಡಿ ಎಂದು ಎಐಸಿಸಿ ಅಧ್ಯಕ್ಷರನ್ನು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
-ಗೋಪಾಲಕೃಷ್ಣ ಬೇಳೂರು, ಶಾಸಕ







