ಸಾಗರ : ರಾಜ್ಯದಲ್ಲಿ ಆರೋಗ್ಯ ಹಕ್ಕು ಜಾರಿಗೆ ಒತ್ತಾಯಿಸಿ ದಲಿತರಿಂದ ಧರಣಿ

ಸಾಗರ: ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿನ ಸರಣಿ ಕೊನೆಯಾಗಬೇಕು. ತಪ್ಪಿತಸ್ಥ ಕೆ.ಎಸ್.ಎಂ.ಸಿ.ಎಲ್.ಗೆ ಶಿಕ್ಷೆಯಾಗಬೇಕು. ರಾಜ್ಯದಲ್ಲಿ ಆರೋಗ್ಯ ಹಕ್ಕು ಜಾರಿ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅರಣ್ಯಮೂಲ ಬುಡಕಟ್ಟು ಒಕ್ಕೂಟದ ರಾಜ್ಯ ಸಂಚಾಲಕ ರಾಮಣ್ಣ ಹಸಲರು, ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಹೆಚ್ಚುತ್ತಿರುವುದು ಆತಂಕಕಾರಿ. ಬಾಣಂತಿಯರಿಗೆ ಪೂರಕವಾದ ಚಿಕಿತ್ಸೆ ಸಿಗುತ್ತಿಲ್ಲ. ಕಳಪೆ ಗುಣಮಟ್ಟದ ಔಷಧಿಯೆ ಬಾಣಂತಿಯರ ಸಾವಿಗೆ ಕಾರಣವಾಗಿದೆ. ಎಲ್ಲರಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗಬೇಕು. ಆಸ್ಪತ್ರೆಗಳಲ್ಲಿ ಶ್ರೀಮಂತ ವರ್ಗದವರಿಗೆ ಮಾತ್ರ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ. ಕೇರಳ, ತಮಿಳುನಾಡು ರಾಜ್ಯದಂತೆ ರಾಜ್ಯದಲ್ಲೂ ಆರೋಗ್ಯ ಹಕ್ಕು ಕಾಯ್ದೆ ಜಾರಿಯಾಗಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಬಾಣಂತಿಯರ ಸಾವಿಗೆ ಕಳಪೆ ಔಷಧ ನೀಡಿರುವುದೇ ಕಾರಣ ಎನ್ನುವುದು ಸಾಬೀತಾಗಿದೆ. ವೈದ್ಯಕೀಯ ಪರಿಕರ ಕಳಪೆ ಸರಬರಾಜು ಮಾಡಲಾಗಿದೆ. ಅಮಯಾಕ ಹೆಣ್ಣುಮಕ್ಕಳು ಸಾವಿಗೀಡಾಗಿದ್ದಾರೆ. ತಕ್ಷಣ ಸರ್ಕಾರ ಕಳಪೆ ಔಷಧಿ ಸರಬರಾಜು ಮಾಡಿರುವ ಕಂಪನಿಗಳನ್ನು ವಜಾ ಮಾಡಿ. ಸಾವಿಗೀಡಾಗಿರುವ ಬಾಣಂತಿಯರ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ನಾಗರಾಜ್ ಮಾತನಾಡಿ, ದಿನದಿಂದ ದಿನಕ್ಕೆ ಆರೋಗ್ಯ ಸಮಸ್ಯೆ ಜಾಸ್ತಿಯಾಗುತ್ತಿದೆ. ಚಿಕಿತ್ಸೆಗೆ ದಾಖಲಾಗಿರುವ ಬಾಣಂತಿಯರು ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಸಾವಿಗೀಡಾಗಿದ್ದಾರೆ. ಬಡವರು ಯಾವ ಔಷಧಿ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂದು ಕಳಪೆ ಔಷಧಿ ನೀಡಿರುವ ಶಂಕೆ ಇದೆ. ಸರಕಾರಿ ಆಸ್ಪತ್ರೆಯಲ್ಲಿ ಸಾವು ನೋವು ನಡೆದರೆ ಈತನಕ ಪರಿಹಾರ ಕೊಟ್ಟಿಲ್ಲ. ಇದೊಂದು ದೊಡ್ಡ ಜಾಲವಾಗಿದ್ದು, ತೀವ್ರ ನಿರ್ಲಕ್ಷ್ಯದಿಂದ ಸಾವುಗಳು ಸಂಭವಿಸಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಧರಣಿಯನ್ನು ಉದ್ದೇಶಿಸಿ ಲಕ್ಷ್ಮಮ್ಮ ಹಿರೇಮನೆ, ಪುಟ್ಟರಾಜು ಮಾತನಾಡಿದರು. ಮಂಜಪ್ಪ, ಸವಿತಾ, ಶಿವಪ್ಪ ಗುಡ್ಡೆಕೌತಿ, ನಾಗರತ್ನ, ನೇತ್ರಾವತಿ, ಗಂಗಮ್ಮ, ತಾರಾ ಹುಳೆಗಾರು, ಮಂಜುನಾಥ, ಈಶ್ವರ ಬುಡಕಟ್ಟು, ಬಂಗಾರಪ್ಪ, ನಾರಾಯಣ ಅರಮನೆಕೇರಿ, ವೀರೇಶ್, ಚಂದ್ರಣ್ಣ ಇನ್ನಿತರರು ಹಾಜರಿದ್ದರು.
ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.