ಶಿವಮೊಗ್ಗದಲ್ಲಿ ಕಸಾಪ ಉಳಿಸಿ ಕನ್ನಡಿಗರ ಜಾಗೃತಿ ಸಮಾವೇಶ: ತನಿಖಾ ಆಯೋಗ ನೇಮಿಸಲು ಹಿರಿಯ ಸಾಹಿತಿಗಳ ಒತ್ತಾಯ

ಶಿವಮೊಗ್ಗ : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ಅಮಾನತಿನಲ್ಲಿರಿಸಿ, ಸರಕಾರವು ತನಿಖಾ ಆಯೋಗ ನೇಮಿಸುವ ತುರ್ತಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತನಿಖೆಯಲ್ಲಿ ಕಳಂಕ ಇರುವುದು ಸಾಬೀತಾದರೆ ವಜಾ ಮಾಡಿ. ಇಲ್ಲವಾದರೆ ಅಮಾನತು ರದ್ದುಪಡಿಸಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನು ಪಕ್ಷ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ವೇದಿಕೆಯಾಗಿ ಅವಕಾಶ ಮಾಡಬೇಡಿ. ಸಮ್ಮೇಳನಕ್ಕೆ ಖರ್ಚು ಮಾಡುವ ಕೋಟಿಗಟ್ಟಲೆ ಹಣವನ್ನು ಬಡ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿ ಎಂದು ಸರಕಾರಕ್ಕೆ ಸಲಹೆ ನೀಡಿದರು.
ಮಹೇಶ್ ಜೋಷಿಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ತೆಗೆದು ಹಾಕಿದ ಸರಕಾರಕ್ಕೆ ನಮ್ಮ ಅಭಿನಂದನೆ. ಕಸಾಪದಲ್ಲಿ ನಡೆಯುತ್ತಿರುವ ಆತ್ಮಹೀನ ನಡವಳಿಕೆ ನಿಲ್ಲಬೇಕು. ಅಧಿಕಾರಿಗಳು ನಿವೃತ್ತರಾಗಿ ಕಸಾಪದ ರಾಜ್ಯಾಧ್ಯಕ್ಷರಂತಹ ಹುದ್ದೆಗಳಿಗೆ ಹೋದಾಗ ಇಂತಹ ಅನಾಹುತವಾಗುತ್ತದೆ.ಕಸಾಪಗೆ ಇಂತಹ ದುಷ್ಕಾಳ ಸ್ಥಿತಿ ಎಂದೂ ಬಂದಿರಲಿಲ್ಲ. ಕಸಾಪ ಚುನಾವಣೆಯ ಕ್ರಮವನ್ನು ಮಾಲಿನ್ಯಗೊಳಿಸಿದ ವ್ಯಕ್ತಿ ಮಹೇಶ್ ಜೋಷಿ. ಪಕ್ಷ ರಾಜಕಾರಣದ ಕೊಳಕನ್ನು ಕಸಾಪಗೆ ತಂದಿದ್ದಾರೆ. ಸಾಹಿತ್ಯಿಕ ಮನಸ್ಸು ಇಲ್ಲದವರಲ್ಲಿ ಸರ್ವಾಧಿಕಾರದ ಧೋರಣೆ ಇರುತ್ತದೆ ಎಂದು ಹೇಳಿದರು.
ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸರಕಾರದಿಂದ ಕಸಾಪ ರಾಜ್ಯಾಧ್ಯಕ್ಷರಿಗೆ ಅಂಕುಶ ಹಾಕಿ ಎಂಬ ಒತ್ತಾಯ ಮಾಡಬೇಕಾದ ಅನಿವಾರ್ಯ ಆಜೀವ ಸದಸ್ಯರಾದ ನಮ್ಮದಾಗಿದೆ. ಸಂವಿಧಾನದ ಮೂಲ ಆಶಯವನ್ನು ಬಲಪಡಿಸುವ ತಿದ್ದುಪಡಿಗಳನ್ನು ಸ್ವಾಗತಿಸಬೇಕು ಎಂದು ಸುಪ್ರೀಂ ಕೋರ್ಟ್ ಆಶಿಸುತ್ತದೆ. ಆದರೆ ಮಹೇಶ್ ಜೋಷಿ ಕಸಾಪದ ಮೂಲ ಆಶಯಗಳನ್ನೇ ತಿರುಚುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಜಿಲ್ಲಾಧ್ಯಕ್ಷರಿಗೆ ಇರುವ ಅಧಿಕಾರಗಳನ್ನು ಮೊಟಕುಗೊಳಿಸುವ ಧೋರಣೆ ಖಂಡನಾರ್ಹ ಎಂದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ ಮಾತನಾಡಿ, ಇದು ಕಸಾಪ ವಿರುದ್ಧ ಹೋರಾಟವಲ್ಲ, ಭಾವನಾತ್ಮಕ ಸಂಬಂಧವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿತ್ವದ ವಿರುದ್ಧ ನಮ್ಮ ಹೋರಾಟ. ಸರಕಾರದಿಂದ ಅನುದಾನ ಪಡೆಯುವಾಗ ಕ್ರಿಯಾಯೋಜನೆ ಸಲ್ಲಿಸಬೇಕು. ಅಂತಹ ಕ್ರಿಯಾಯೋಜನೆಗೆ ತಕ್ಕಂತೆ ಖರ್ಚು ಮಾಡಬೇಕಿತ್ತು. ಆದರೆ ರಾಜ್ಯಾಧ್ಯಕ್ಷರು ತಮಗೆ ಬೇಕಾದಂತೆ ಅನುದಾನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿಲ್ಲ. ಆಡಿಟರ್ ಆಕ್ಷೇಪ ಎತ್ತಿದ್ದಾರೆ. ಕಸಾಪದ ಅನುದಾನದಲ್ಲಿ ವಿದೇಶ ಪ್ರವಾಸದ ದುಂದು ವೆಚ್ಚ ಮಾಡುತ್ತಿದ್ದಾರೆ. ಸರಕಾರದ ಅನುದಾನ ಪಡೆದು ಕಸಾಪದ ಬೈಲಾ ಪ್ರಕಾರ ಖರ್ಚು ವೆಚ್ಚ ಮಾಡುತ್ತಿದ್ದೇನೆ ಎನ್ನುತ್ತಾರೆ. ಬೈಲಾವನ್ನು ತನಗೆ ಬೇಕಾದಂತೆ ತಿರುಚುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಮಹಿಳಾ ಹೋರಾಟಗಾರ್ತಿ ಕೆ.ಎಸ್.ನಿರ್ಮಲಾ, ಮೀರಾ ಶಿವಲಿಂಗಯ್ಯ, ಕಲ್ಕುಳಿ ವಿಠಲಹೆಗಡೆ, ಆರ್.ಜೆ.ಹಳ್ಳಿ ನಾಗರಾಜ, ರೋಹಿದಾಸ ನಾಯಕ್ ಮಾತನಾಡಿದರು.
ಸಮಾಜವಾದಿ ನಾಯಕ ಪಿ.ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ.ಎಚ್.ಟಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಸಂಚಾಲಕ ಕೆ.ಪಿ.ಶ್ರೀಪಾಲ್ ಸ್ವಾಗತಿಸಿದರು. ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕ ಡಾ.ಎಚ್.ಟಿ.ಕೃಷ್ಣಮೂರ್ತಿ, ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿದ್ದರು.