ಸಾಮಾಜಿಕ ಕ್ರಾಂತಿ ಹೋರಾಟದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ: ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಲೋಕೇಶ್

ಚಿಕ್ಕಮಗಳೂರು : ಸಾಮಾಜಿಕ ಕ್ರಾಂತಿಕಾರಿ ಬದಲಾವಣೆ ಮೂಡಿಸುವುದು ಬಂದೂಕಿನಿಂದಲ್ಲ. ಹೊಸ ರಾಜಕೀಯ ಬದಲಾವಣೆ ಅರ್ಥೈಸಿಕೊಂಡು, ನಿವೇಶನ ಹಾಗೂ ಭೂರಹಿತರು ಹೋರಾಟ ರೂಪಿಸಿದಾಗ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಹೇಳಿದ್ದಾರೆ.
ನಗರದ ಸಿಪಿಐ ಕಚೇರಿಯಲ್ಲಿ ಸಿಪಿಐ ಶತಮಾನ ಸಂಭ್ರಮದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತಮಾನದಿಂದ ಅಧಿಕಾರ ಇಲ್ಲದಿದ್ದರೂ ಜನತೆಯ ನೋವು, ನಿರಾಸೆ ಹಾಗೂ ಶೋಷಿತರ ಪರವಾಗಿ ನಿರಂತರವಾಗಿ ಹೋರಾಡುತ್ತಿರುವ ಪಕ್ಷ ಸಿಪಿಐ. ಸ್ವಾತಂತ್ರ್ಯ ಪೂರ್ವದ ಮುಂಚೆಯೂ ಬ್ರಿಟಿಷರ ಬೂಟು ನೆಕ್ಕಿಕೊಂಡು ಅಧಿಕಾರ ನಡೆಸಿದ ಎರಡು ರಾಷ್ಟ್ರೀಯ ಪಕ್ಷಗಳು ರೈತರು, ಕಾರ್ಮಿಕ ವರ್ಗವನ್ನು ಅಡಿಯಾಳಗಿಸಿಕೊಂಡು ವೈಯಕ್ತಿಕವಾಗಿ ಸಿರಿಸಂಪತ್ತು ಹೆಚ್ಚಿಸಿಕೊಳ್ಳುತ್ತಲೇ ಇವೆ ಎಂದು ಆರೋಪಿಸಿದರು.
ರಾಷ್ಟ್ರದಲ್ಲಿ ಶೇ.80ರಷ್ಟು ದುಡಿಯುವ ವರ್ಗದವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಆಸ್ತಿ-ಅಂತಸ್ತು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಶ್ರಮಿಕರನ್ನು ಕೆಳಗೆ ತಳ್ಳುತ್ತಿದ್ದಾರೆ. ಜಾತಿ ತಾರತಮ್ಯ, ಬಡವ-ಶ್ರೀಮಂತ ಎಂದು ವಿಂಗಡಿಸಿ ಜನಾಂಗವನ್ನು ಒಡೆಯುತ್ತಿದ್ದಾರೆ. ಇದರ ವಿರುದ್ಧ ಕಮ್ಯುನಿಸ್ಟ್ ಪಕ್ಷ ಹೋರಾಟ ರೂಪಿಸಿದ ಕಾರಣ ಇಂದು ಶೋಷಿತರು ಸ್ವಾಭಿಮಾನದ ಜೀವನಕ್ಕೆ ದಾರಿಯಾಗಿದೆ ಎಂದರು.
ದೇಶದ ಬಹುಸಂಖ್ಯಾತರು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಜಾತಿ ಸಮೀಕ್ಷೆ ಕಡ್ಡಾಯವಾಗಿದೆ. ಆದರೆ ಕೇಂದ್ರ ಸರಕಾರ ಜನಗಣತಿಗೆ ಮುಂದಾಗಿರುವುದು ಸರಿಯಾದ ನಿರ್ಧಾರವಲ್ಲ. ಈ ಹಿಂದೆ 1932ರಲ್ಲಿ ಬ್ರಿಟಿ ಷರ ಆಳ್ವಿಕೆಯಲ್ಲಿ ಜಾತಿಸಮೀಕ್ಷೆ ನಡೆದಿತ್ತು. ಇದಾದ ಬಳಿಕ ಇಂದಿಗೂ ದೇಶದಲ್ಲಿ ಸಮೀಕ್ಷೆಗೆ ಯಾವ ಸರಕಾರಗಳು ಆಸಕ್ತಿ ತೋರದೇ ಬಹುಜನರನ್ನು ತುಳಿಯುತ್ತಿದೆ ಎಂದರು.
ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ರಾಜ್ಯದ ಜನತೆ ಟಿವಿ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಎರಡೇ ರಾಜಕೀಯ ಪಕ್ಷಗಳು ಎಂದು ನಂಬುತ್ತಿದೆ. ಈ ರಾಜಕಾರಣಿಗಳು ವ್ಯಾಪಾರ ದೃಷ್ಟಿಯಿಂದ ರಾಜಕಾರಣ ಮಾಡುತ್ತಿದೆ. ಟಿಕೆಟ್‌ಗಾಗಿ ಜಾತಿ ಮತ್ತು ಖರ್ಚಿನ ಶಕ್ತಿ ಕೇಳುತ್ತಾರೆ. ಈ ನಡುವೆ ಸಿಪಿಐ ತ್ಯಾಗ, ಬಲಿದಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಉತ್ತಮ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಮಿಕರು, ರೈತರು ಎಚ್ಚೆತ್ತುಕೊಂಡು ಸ್ವಹಕ್ಕುಗಳನ್ನು ಪಡೆದುಕೊಳ್ಳುವ ಶಕ್ತಿ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಘನತೆಯಿಂದ ಜೀವಿಸಲು ಸಾಧ್ಯ ಹಾಗೂ ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಿ ದುಡಿವವರನ್ನು ಆಳುವ ವರ್ಗವನ್ನಾಗಿ ರೂಪಿಸಬೇಕೆಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಜಿ.ರಘು, ಕೆಳಗೂರು ರಮೇಶ್, ಸದಸ್ಯ ಎಸ್.ವಿಜಯ್‌ಕುಮಾರ್, ತಾಲೂಕು ಸಹ ಕಾರ್ಯದರ್ಶಿ ಕುಮಾರ್, ನಗರ ಕಾರ್ಯದರ್ಶಿ ಜಿ.ರಮೇಶ್ ಉಪಸ್ಥಿತರಿದ್ದರು.







