ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ | ರಾಜ್ಯ ಸರಕಾರದ ಬಹಿಷ್ಕಾರಕ್ಕೆ ಮಧು ಬಂಗಾರಪ್ಪ ಕಾರಣ : ಹಾಲಪ್ಪ ಆರೋಪ

ಶಿವಮೊಗ್ಗ: ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಬಹಿಷ್ಕಾರ ಹಾಕಿ ಒಕ್ಕೂಟ ವ್ಯವಸ್ಥೆಗೆ ಅಸಹಕಾರ ಮನೋಭಾವವನ್ನು ತೋರಿದೆ. ಈ ಬೆಳವಣಿಗೆಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಪಾತ್ರವಿದೆ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಗರಕ್ಕೆ ಆಗಮಿಸಿದ್ದ ಸಚಿವ ಸತೀಶ್ ಜಾರಕಿಹೋಳಿ ಕೊನೆಯ ವೇಳೆ ವಾಪಸ್ ಹೋಗಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ಸಚಿವರು, ಅಧಿಕಾರಿಗಳು ಭಾಗವಹಿಸದೆ ಇರುವುದಕ್ಕೆ ಮುಖ್ಯಮಂತ್ರಿಯ ಪಾತ್ರವೇನಿಲ್ಲ. ಜಿಲ್ಲಾ ಸಚಿವ ಮಧು ಬಂಗಾರಪ್ಪ ಸೇತುವೆ ಕೆಲಸದಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಕಸಿವಿಸಿಯಾಗಿ ಕೀಳಿರಿಮೆಯಿಂದ ಬಹಿಷ್ಕರಿಸಿದ್ದಾರೆ ಎಂದು ಆರೋಪಿಸಿದರು.
ಸೇತುವೆಗೆ ಯಾರಪ್ಪನ ದುಡ್ಡೂ ಹಾಕಿಲ್ಲ. ಸರಕಾರದ ದುಡ್ಡು. ಕಾಂಗ್ರೆಸ್ ಸರಕಾರವಿದ್ದಾಗಲೇ ಯಾಕೆ ಸೇತುವೆ ಮಾಡಬಾರದಿತ್ತು. ಅಸಂಬದ್ಧ ಮಾತುಗಳನ್ನು ಬಿಡಬೇಕು. ಯಡಿಯೂರಪ್ಪ ಮತ್ತು ಮಕ್ಕಳು ಯಾವತ್ತೂ ಅಭಿವೃದ್ಧಿಗೆ ವಿರೋಧ ಮಾಡಿಲ್ಲ. ಸೇತುವೆ ಉದ್ಘಾಟನೆಯಲ್ಲಿ ಯಾವುದೇ ಶಿಷ್ಟಾಚಾರದ ಲೋಪ ಆಗಿಲ್ಲವೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ವ್ಯಕ್ತಿ. ನಮ್ಮ ಪಕ್ಷ ಸಿದ್ಧಾಂತ ಏನೇ ಇದ್ದರೂ ಅವರನ್ನು ಗೌರವಿಸುತ್ತೇವೆ. ಆದರೆ ಅವರು ಜಿಲ್ಲಾ ಮಂತ್ರಿ, ಶಾಸಕರ ಮಾತು ಕೇಳಿಕೊಂಡು ಕಾರ್ಯಕ್ರಮಕ್ಕೆ ಬಾರದೆ ಇರುವ ಸಣ್ಣತನ ತೋರಬಾರದಿತ್ತು. ಹಸಿರುಮಕ್ಕಿ ಸೇತುವೆಗೆ ಬಿಜೆಪಿ ಸರಕಾರ ಇರುವಾಗ 50 ಕೋ.ರೂ. ಬಿಡುಗಡೆ ಮಾಡಿತ್ತು. ಈಗ ಕಾಂಗ್ರೆಸ್ ಸರಕಾರವೇ ಇದೆ. ಜಿಲ್ಲಾ ಮಂತ್ರಿ ಮಧುಬಂಗಾರಪ್ಪ ಹಣ ತಂದು ಸೇತುವೆ ಪೂರ್ಣಗೊಳಿಸಲಿ ಎಂದು ಸವಾಲು ಹಾಕಿದರು.
ಸುದ್ಧಿಗೋಷ್ಠಿಯಲ್ಲಿ ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಶಿವರಾಜು, ಹರಿಕೃಷ್ಣ, ಅಣ್ಣಪ್ಪ, ಮಾಲತೇಶ ಉಪಸ್ಥಿತರಿದ್ದರು.







