ಸಿಗಂದೂರು ದೇವಾಲಯ ಕುರಿತು ಹೇಳಿಕೆ | ಸಚಿವರ ಹೇಳಿಕೆ ತಿರುಚುವವರ ವಿರುದ್ಧ ಕ್ರಮ ಕೈಗೊಳ್ಳಿ : ಸಿಗಂದೂರು ದೇವಿ ಭಕ್ತ ಮಂಡಳಿ ಒತ್ತಾಯ

ಶಿವಮೊಗ್ಗ: ಸಿಗಂದೂರು ದೇವಸ್ಥಾನ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನೇ ತಿರುಚಿ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮುದಾಯದ ನಡುವೆ ಸಂಘರ್ಷ ಸೃಷ್ಟಿಸುವ ಮತ್ತು ಸಚಿವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅವಮಾನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀ ಕ್ಷೇತ್ರ ಸಿಗಂದೂರು ದೇವಿ ಭಕ್ತ ಮಂಡಳಿ ವತಿಯಿಂದ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜು.21ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಮಾಧ್ಯಮ ಪ್ರತಿನಿಧಿಗಳು ಸಿಗಂಧೂರು ಸೇತುವೆ ವಿಷಯವಾಗಿ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಸಿಗಂಧೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ’ ಎಂದು ನೀಡಿದ ಹೇಳಿಕೆಯನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿ ತಿರುಚಿದ್ದಾರೆ.
ಮಂತ್ರಿಗಳನ್ನು ಗೌರವಿಸುತ್ತಿದ್ದ ಸಮಾಜದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಿಂದ ಧಾರ್ಮಿಕ ಭಾವನೆಗೆ ದಕ್ಕೆ ತರುವ ಹೇಳಿಕೆ ನೀಡಿದ್ದಾರೆ ಎಂದು ಜನ ತಪ್ಪು ಭಾವನೆ ಮೂಡುವಂತೆ ಸಾರ್ವಜನಿಕರನ್ನು ಉದ್ರೇಕಿಸುವಂತೆ ಬಜೆಪಿ ಪ್ರಚೋದಿಸುತ್ತಿದೆ ಎಂದು ದೂರಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಡಿ.ಮಂಜುನಾಥ್, ವಿನೋದ್ ಕೆ., ಮಂಜು ಪುರಲೆ, ಕೆ.ಸಿ.ನಾಗರಾಜ್, ಲೋಕೇಶ್, ಉಮೇಶ್, ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಎನ್.ಪಿ.ಧರ್ಮರಾಜ್, ರಾಮಪ್ಪ, ರಾಜಶೇಖರ್, ಉಮೇಶ್ ಕೆ.ಸಿ., ಎಚ್. ಕಲ್ಲನ, ಕೆ.ವೈ.ರಾಮಚಂದ್ರಪ್ಪ, ಎಂ.ಬಿ.ರಾಜು, ಪರಮೇಶ್ವರಪ್ಪ, ಎ.ಎಂ.ರಮೇಶ್ ಉಪಸ್ಥಿತರಿದ್ದರು.







