ಮಾಧ್ಯಮಗಳ ಬಹುದೊಡ್ಡ ಶಕ್ತಿ ಅಂದರೆ ಅದಕ್ಕಿರುವ ವಿಶ್ವಾಸರ್ಹತೆ : ದಿನೇಶ್ ಅಮಿನ್ ಮಟ್ಟು

ಶಿವಮೊಗ್ಗ : ಇತ್ತೀಚಿನ ವಿದ್ಯಮಾನದಲ್ಲಿ ಉದ್ಯಮಿಗಳು ತಮ್ಮ ಸಾಮ್ರಾಜ್ಯ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಮಾಧ್ಯಮ ರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಇದರಿಂದ ಉದ್ಯಮಿಗಳು ಮತ್ತು ಧರ್ಮಗುರುಗಳು ಮಾಧ್ಯಮವನ್ನು ಒಂದು ಆಯುಧವಾಗಿ ಬಳಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಜಿಲ್ಲಾ ಶಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ನಗರದ ಸರಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪತ್ರಿಕಾ ಪುರಸ್ಕಾರ, ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಉಪನ್ಯಾಸ ನೀಡಿದರು.
ಮಾಧ್ಯಮ ಕ್ಷೇತ್ರದ ಬಹಳ ದೊಡ್ಡ ಶತ್ರುಗಳು ರಾಜಕಾರಣಿಗಳು ಅಲ್ಲ. ರಾಜಕಾರಣಿಗಳಿಗೆ ನೀವು ಎಷ್ಟಾದರೂ ಬೈದರೂ ದಕ್ಕಿಸಿಕೊಳ್ಳಬಹುದು. ಆದರೆ, ಧರ್ಮ ಗುರುಗಳಿಗೆ ಮುಟ್ಟಿದರೆ ಇಂದು ನೋಟಿಸ್‌ಗಳು ಬರುತ್ತವೆ. ನಿಮ್ಮ ತಲೆಗಳು ಹೋಗುತ್ತವೆ. ಇದು ಇವತ್ತಿನ ಪರಿಸ್ಥಿತಿ ಎಂದರು.
ಇಂದು ಮಾಧ್ಯಮ ಕ್ರೋನಿಕ್ಯಾಪಿಟಲಿಸ್ಟ್ ಉದ್ಯಮಿಗಳು, ಧರ್ಮಗುರುಗಳ ಆಯುಧವಾಗಿದೆ. ಯಾವುದೇ ಧರ್ಮಗುರು, ಮಠದ ವಿರುದ್ಧ ಬರೆದು ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಬಹಳದೊಡ್ಡ ಅಂಧಭಕ್ತರ ಪಡೆಯಿದೆ. ನಾವೆಲ್ಲ ಬಸವಣ್ಣ ಪರಂಪರೆಯಿಂದ ಬಂದವರು. ನಮಗೆ ದೇವರ ಕಾಣಲು ಯಾವುದೇ ಏಜೆಂಟ್ ಬೇಕಾಗಿಲ್ಲ. ಹಾಗಾಗಿ ದೇವರು ಬೇರೆ, ಧರ್ಮಗುರುಗಳು ಬೇರೆ ಎನ್ನುವ ಅರಿವು ನೀವು ಮೂಡಿಸಿಕೊಳ್ಳಬೇಕೆಂದು ಹೇಳಿದರು
ಮಾಧ್ಯಮಗಳ ಬಹುದೊಡ್ಡ ಶಕ್ತಿ ಅಂದರೆ ಅದಕ್ಕಿರುವ ವಿಶ್ವಾಸರ್ಹತೆ. ಇಂದು ಸುಳ್ಳು ಸುದ್ದಿಗಳಿಂದ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಂಡುಬಿಟ್ಟಿವೆ. ಕೆಲವೊಂದು ಇಂಗ್ಲಿಷ್ ಪತ್ರಿಕೆಗಳು, ಕನ್ನಡ ಪತ್ರಿಕೆಗಳು ದೋಣಿ ಮಗುಚಿ ಬೀಳದ ಹಾಗೆ ಕಾರ್ಯ ನಿರ್ವಹಿಸುತ್ತಿವೆ. ಒಮ್ಮೆ ವಿಶ್ವಾಸವನ್ನು ಕಳೆದುಕೊಂಡರೆ ಜನರು ಕಾಲಕ್ರಮೇಣ ಪತ್ರಿಕೆಯನ್ನು ನಂಬುವುದಿಲ್ಲ ಎಂದರು.
ಈ ದೇಶದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳಿದ್ದರೆ ಒಂದು ರೈತನ ಬೆಳೆ, ಮತ್ತೊಂದು ದಿನ ಪತ್ರಿಕೆ. ಓದುಗನ ಹಣದಿಂದ ಪತ್ರಿಕೆ ನಡೆಸಲು ಸಾಧ್ಯವಿಲ್ಲ ಎಂದರು.
ಅತಿಯಾಗಿ ಬೆಳೆಯುವುದಕ್ಕೆ ಹೋದರೆ ತಡೆ ಬೀಳುತ್ತದೆ. ಮೊದಲೆಲ್ಲ ಓದುಗರಿಗೆ ಧ್ವನಿ ಇರಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಓದುಗನಿಗೆ ಧ್ವನಿ ಇದೆ. ಪತ್ರಕರ್ತರಿಗೆ ಉತ್ತರದಾಯಿತ್ವ, ಪಾರದರ್ಶಕತೆ ಇರಬೇಕು. ಎಷ್ಟೋ ವೈರಲ್ ಪೋಸ್ಟ್‌ಗಳಿಂದ ಒಳ್ಳೆಯದೂ ಆಗಿದೆ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಯಾವುದೇ ಸವಾಲುಗಳು ಬಂದರೂ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ. ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಇನ್ನೂ ಆಗಬೇಕಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.
ಶರಣ್ಯ ನಾಯಕ್, ನವ ಎಸ್.ನಾಯಕ್, ರಘು ಸಮರ್ಥ ನಾಡಿಗ್, ಸಮರ್ಥ ಎಸ್.ಕಿರುವಾಸೆ, ವೈ.ಎಸ್.ಅನಿಕೇತನ್, ವೈ.ಎಸ್.ಆಯುಷ್, ಕೆ.ಎನ್.ಶ್ರೇಯಾ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ ಉಪಸ್ಥಿತರಿದ್ದರು.







