ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಅಲ್ಲ : ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ
ಮೈಸೂರು : ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷವನ್ನು ಕಾರ್ಯಕರ್ತರು ಕಟ್ಟಿ ಬೆಳೆಸಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯ ಸರಕಾರದ ವೈಫಲ್ಯದಿಂದ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಎಲ್ಲಾ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಗುರಿ. ರಾಜ್ಯದಲ್ಲಿ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಮೊದಲು ಎಲ್ಲಾ ರೀತಿಯ ಸಂಘಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ. ತಂದೆ, ತಾತ ಅವರ ಅನಾರೋಗ್ಯ ಹಿನ್ನೆಲೆ ಒತ್ತಡ ಬರುತ್ತಿದೆ. ಆದರೆ, ಪಕ್ಷದಲ್ಲಿ ಹಲವು ಹಿರಿಯ ನಾಯಕರು ಇದ್ದಾರೆ. ಸದ್ಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಎಂಬುದು ಅಪ್ರಸ್ತುತ ಎನಿಸಿದೆ ಎಂದು ತಿಳಿಸಿದರು.
ಪೂರ್ವನಿಯೋಜಿತ ಕೃತ್ಯ : ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಪರಮೇಶ್ವರ್ ಅವರು ಅಸಾಹಯಕರಾಗಿ ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಯುವಕನ ಗಡಿಪಾರಿಗೆ ಚಿಂತನೆ ಮಾಡುತ್ತಿದ್ದಾರೆ. ಅಂತಹ ಗಡಿಪಾರು ಮಾಡುವುದಾದರೆ ನಮ್ಮ ಪಕ್ಷದ ಪೇಜ್ ಅಲ್ಲೂ ಹಲವು ಪೋಸ್ಟ್ ಹಾಕುತ್ತಾರೆ. ಉದಯಗಿರಿ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂದು ನಿಖಿಲ್ ಆರೋಪಿಸಿದರು.