ನಾನು ಸಿಎಂ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ: ಡಿಕೆ ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ, ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು.
ಜಾರ್ಜ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ವಿಪಕ್ಷದವರು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಲೇ ಇರುತ್ತಾರೆ. ಆಗ ಅಧಿಕಾರಿಗಳಿಗೆ ನಾವು ಕೆಲವೊಂದು ಸೂಚನೆ ನೀಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಹಸ್ತಕ್ಷೇಪದ ವಿಚಾರ ನನಗೆ ಗೊತ್ತಿಲ್ಲ ಎಂದರು.
ಮನರೇಗಾ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ವಿಚಾರ ಮಾತನಾಡಿದ ಅವರು, ಕೇಂದ್ರ ಸರಕಾರ ನರೇಗಾ ರದ್ದು ಪಡಿಸಿರುವ ವಿಚಾರವನ್ನು ಜಾಹೀರಾತು ಮೂಲಕ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದೇವೆ. ಅದರಲ್ಲಿ ತಪ್ಪೇನಿದೆ?. ಮನರೇಗಾ ವಿಚಾರದಲ್ಲಿ ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರಿಗೆ ಅನ್ಯಾಯ ಮಾಡಿದೆ. ಅದನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಮನರೇಗಾ ಯೋಜನೆಯಿಂದ ಒಳ್ಳೆಯ ಕೆಲಸ ನಡೆಯುತ್ತಿದೆ. ಹಸಿದವರಿಗೆ ಆಹಾರ ಕೊಡಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಗಾಂಧಿ ಹೆಸರನ್ನು ತೆಗೆದು ಹಾಕಿ, ಅದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಡಿಕೆಶಿ, ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ಮಹಾತ್ಮಾ ಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ ಎಂದರು.
ಚೋರ್ಲಾ ಘಾಟ್ನಲ್ಲಿ 400 ಕೋಟಿ ರೂ. ಇದ್ದ ವಾಹನ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಲಿ, ಎಲ್ಲಿತ್ತು ಎಂದು ಹೇಳಲಿ. ಅದು ಕಾಂಗ್ರೆಸ್ಗೆ ಸೇರಿದ್ದು ಎಂದು ಹೇಳಿ ಸುಮ್ಮನೆ ನಗೆ ಪಾಟಲಿಗೀಡಾಗುವುದು ಬೇಡ ಎಂದು ತಿರುಗೇಟು ನೀಡಿದರು.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಅದೇ ರೀತಿ ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳಿಗೂ ಶೀಘ್ರದಲ್ಲೇ ಚುನಾವಣೆ ನಡೆಸಲು ಕ್ರಮ ವಹಿಸಲಾಗುವುದು ಎಂದರು.
ಐದು ಗ್ಯಾರಂಟಿ ಕುರಿತು ಮನೆಗೊಂದು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸುಮಾರು ೭೩ ಸಾವಿರ ಜನ ಇದರಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಮುಸ್ಲಿಮರಿಗೆ ಮೆಹಂದಿ, ಮಕ್ಕಳಿಗೆ ಚಿತ್ರಕಲೆ, ಯೋಗ ಸ್ಪರ್ಧೆ ನಡೆಯುತ್ತಿದೆ ಎಂದು ಡಿಕೆಶಿ ತಿಳಿಸಿದರು.







