ಶಿವಮೊಗ್ಗ ಪ್ರವೇಶಿಸದಂತೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‌ರನ್ನು ತಡೆದ ಪೊಲೀಸರು

ಶಿವಮೊಗ್ಗ : ಶಿವಮೊಗ್ಗ ಪ್ರವೇಶಿಸದಂತೆ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಶಿವಮೊಗ್ಗದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಲವ್ ಜಿಹಾದ್ ಕುರಿತ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.
ಶಿವಮೊಗ್ಗ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗದ ರಾಗಿಗುಡ್ಡ ಬಳಿ ತಡೆದಿದ್ದಾರೆ. ಈ ವೇಳೆ ಪೋಲಿಸರು ಮತ್ತು ಮುತಾಲಿಕ್ ಮಧ್ಯೆ ವಾಗ್ವಾದ ಕೂಡ ನಡೆದಿದೆ.
ಏಳು ದಿನಗಳ ಕಾಲ ನಿರ್ಬಂಧ:
ಏಳು ದಿನಗಳ ಕಾಲ ಶಿವಮೊಗ್ಗಕ್ಕೆ ಪ್ರವೇಶಿಸದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮುತಾಲಿಕ್:
ಶಿವಮೊಗ್ಗ ಪ್ರವೇಶಿಸದಂತೆ ತಡೆದ ಪೊಲೀಸರ ವಿರುದ್ದ ಅಸಮಾಧಾನ ಹೊರಹಾಕಿದ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ. ಕಾಂಗ್ರೆಸ್ ದುರಾಡಳಿತ ಎದ್ದು ಕಾಣುತ್ತಿದೆ ಎಂದು ದೂರಿದರು.
ಜಿಲ್ಲಾಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಎನ್.ಆರ್.ಪುರ ರಸ್ತೆ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ತೆರಳಿದರು.