ಅಲ್ಪಸಂಖ್ಯಾತರ ವಸತಿ ಶಾಲೆಗಳ ಸುಧಾರಣೆಗೆ ಆದ್ಯತೆ: ಯು.ಟಿ. ಖಾದರ್

ಶಿವಮೊಗ್ಗ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಸರಕಾರ ವಿಶೇಷ ಆದ್ಯತೆ ನೀಡಿದ್ದು, ಶಾಲೆಗಳ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಗಳನ್ನು ಸಿ.ಎ. ನಿವೇಶನಗಳ ಮೂಲಕ ಗುರುತಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಖಾತೆ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಜಿಪಂನ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪೂರೈಸುವ ಸಮವಸ್ತ್ರ, ಶೂ, ಸಾಕ್ಸ್, ಶಾಲಾ ಬ್ಯಾಗ್‌ಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ವಿತರಣೆಗೂ ಮುನ್ನ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಬೇಕು. ಗುಣಮಟ್ಟ ತೃಪ್ತಿಕರವಾಗಿದ್ದರೆ ಮಾತ್ರ ವಿದ್ಯಾರ್ಥಿ ಗಳಿಗೆ ವಿತರಿಸಬೇಕು. ಕಳಪೆ ವಸ್ತುಗಳನ್ನು ಹಿಂದಿರುಗಿಸುವುದರ ಜೊತೆಗೆ ಅವುಗಳನ್ನು ಸರಬರಾಜು ಮಾಡಿದ ಟೆಂಡರ್‌ದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
‘ಸಮಗ್ರ ಪ್ರಸ್ತಾವ ಸಲ್ಲಿಸಿ’
ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕಂಡುಬರುವ ಸಾಮಾನ್ಯ ಹಾಗೂ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ಶಾಲೆಗಳಲ್ಲಿನ ಸಮಸ್ಯೆಗಳು, ಅಗತ್ಯ ಅನುದಾನ ಹಾಗೂ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಇಲಾಖಾ ಆಯುಕ್ತರಿಗೆ ಸಮಗ್ರ ಪ್ರಸ್ತಾವ ಸಲ್ಲಿಸುವಂತೆ ಖಾದರ್ ಸೂಚಿಸಿದರು.
ರಾಜ್ಯದ ಅಲ್ಪಸಂಖ್ಯಾತರ ಶಾಲೆಗಳ ಶೈಕ್ಷಣಿಕ ಗುಣಮಟ್ಟ, ವಸತಿ ಸೌಲಭ್ಯ, ಶಿಕ್ಷಕರ ಲಭ್ಯತೆ, ಇತರ ಮೂಲಸೌಕರ್ಯಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಖಾಸಗಿ ಸಂಸ್ಥೆಯೊಂದಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿಯ ಆಧಾರದ ಮೇಲೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅಗತ್ಯ ನೇಮಕಾತಿ ಕ್ರಮ ಕೈಗೊಳ್ಳಲಾಗುವುದು.
-ಯು.ಟಿ.ಖಾದರ್, ಸಚಿವ






