ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) : ಭದ್ರಾವತಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ವಿಚಾರಗೋಷ್ಠಿ

ಭದ್ರಾವತಿ: "ಪ್ರವಾದಿ ಮುಹಮ್ಮದ್ (ಸ) ಅವರು ಅಂಧಕಾರದಲ್ಲಿ ಮುಳುಗಿದ್ದ ಒಂದು ಸಮಾಜಕ್ಕೆ ಸತ್ಯ, ನ್ಯಾಯ ಹಾಗೂ ಭ್ರಾತೃತ್ವದ ಮೂಲಕ ಬೆಳಕನ್ನು ತೋರಿಸಿದರು" ಎಂದು ಚಿಂತಕ, ಭದ್ರಾವತಿ ಕ.ಸಾ.ಪ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಭದ್ರಾವತಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸ್ಥಳೀಯ ಮಸ್ಜಿದೆ ಆಯಿಶಾ ಸಭಾಂಗಣದಲ್ಲಿ ' ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ಎಂಬ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
"ಪ್ರವಾದಿಗಳು ದೇವರನ್ನು ಪರಿಚಯಿಸಿದರು, ಈ ಜಗತ್ತಿಗೆ ಬಂದ ಎಲ್ಲ ಪ್ರವಾದಿಗಳ ಸಂದೇಶ ಏಕದೇವ, ಏಕಮಾನವ ಕುಲ ಎಂಬುದಾಗಿತ್ತು. ಪ್ರಸ್ತುತ ಸಮಾಜವು ಪ್ರವಾದಿ ಅವರನ್ನು ಅರಿತು ಅವರ ಸಂದೇಶಗಳನ್ನು ಅನುಸರಿಸಿದರೆ ಒಂದು ಮಾದರಿ ಸಮಾಜವನ್ನು ಕಟ್ಟಿ ಬೆಳೆಸಲು ಸಾಧ್ಯ ಎಂದು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಚಿಂತಕ ಪ್ರೊ. ಚಂದ್ರಶೇಖರ್ ಸಂದರ್ಭೋಚಿತವಾಗಿ ಮಾತನಾಡಿದರು. ಜ.ಇ. ಹಿಂದ್ ಭದ್ರಾವತಿ ಇದರ ಸ್ಥಾನೀಯ ಅಧ್ಯಕ್ಷ ಮೌಲಾನ ಸುಲ್ತಾನ್ ಬೇಗ್ ಇವರ ಕುರ್ ಆನ್ ಪಠಣದೊಂದಿಗೆ ಸಮಾರಂಭವು ಆರಂಭಗೊಂಡಿತು.
ಅಬ್ದುಲ್ ಖದೀರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗವಲಯ ಸಂಚಾಲಕ ಮೌಲಾನ ಮುಹಮ್ಮದ್ ಸಲೀಂ ಉಮರಿ ಹಾಗೂ ಎಲ್ಲ ಸಮುದಾಯದ ಜನರು ಉಪಸ್ಥಿತರಿದ್ದರು.







