ಕಾಲ್ತುಳಿತ ಪ್ರಕರಣ | ಜೂ.13ರಂದು ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ: ವಿಜಯೇಂದ್ರ

ಬಿ.ವೈ.ವಿಜಯೇಂದ್ರ
ಶಿವಮೊಗ್ಗ, ಜೂ.10: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಯುವ ಜನರ ಸಾವಿಗೆ ಕಾರಣವಾದ ಜನ ವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಜೂ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೂನ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಿಜೆಪಿ ಕಾರ್ಯಕರ್ತರು, ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬದವರು, ಪಕ್ಷದ ಪ್ರಮುಖ ನಾಯಕರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಜೂ.4 ರಾಜ್ಯದ ಪಾಲಿಗೆ ಅತ್ಯಂತ ಕರಾಳ ದಿನ ಎಂದ ವಿಜಯೇಂದ್ರ, ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಗೆಲುವಿನಲ್ಲಿ ಪಾಲು ಪಡೆಯಲು ಇಬ್ಬರು ದಿಗ್ಗಜರ ನಡುವಿನ ಹಠ ಮತ್ತು ಚಟದ ಪರಿಣಾಮ ಬೆಂಗಳೂರಿನಲ್ಲಿ ಘೋರ ದುರಂತ ನಡೆಯಿತು ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಭದ್ರತೆ ಒದಗಿಸಲು ಸಿಬ್ಬಂದಿ ಕೊರತೆಯಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು. ಒಬ್ಬ ಕಿರಿಯ ಪೊಲೀಸ್ ಅಧಿಕಾರಿಗೆ ಅನಿಸಿದ್ದು ಸಿಎಂ ಸಿದ್ದರಾಮಯ್ಯರಿಗೆ ಅನಿಸಲೇ ಇಲ್ಲ. ಕೇವಲ 30-40 ಸಾವಿರ ಜನರು ಸೇರುತ್ತಾರೆ ಅಂದುಕೊಂಡಿದ್ದೆವು ಎಂದು ಆ ಬಳಿಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕಾಲ್ತುಳಿತ ಪ್ರಕರಣವನ್ನು ಖಂಡಿಸಿ ಜೂನ್ 16ರಂದು ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.
ವಿಧಾನಸೌಧದ ಮೆಟ್ಟಿಲ ಮೇಲೆ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಕುಟುಂಬದವರೆ ಸುತ್ತುವರಿದಿದ್ದರು. ವಿಧಾನಸೌಧದ ಮುಂದೆ ಅಭಿಮಾನಿಗಳಿಗೆ ಆಟಗಾರರು ಕಾಣಿಸಲಿಲ್ಲ. ಹಾಗಾಗಿ ಅಲ್ಲಿದ್ದ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಕಡೆಗೆ ಧಾವಿಸಿದ್ದರು. ಇದರಿಂದ ಸಮಸ್ಯೆ ಹೆಚ್ಚಾಯಿತು ಎಂದರು.
ಆರ್ಸಿಬಿ ಗೆಲುವಿನ ನಂತರ ವಿಧಾನಸೌಧದ ಮೆಟ್ಟಿಲಿನ ಮೇಲೆ ಸಿಎಂ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಡಿಸಿಎಂ ಅವರು ಪೈಪೋಟಿಗೆ ಬಿದ್ದವರಂತೆ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಆಟಗಾರರನ್ನು ತಬ್ಬಿಕೊಂಡು, ಅಪ್ಪಿಕೊಂಡು ಬಂದಿದ್ದರು. ಸ್ವಲ್ಪ ಅವಕಾಶ ಸಿಕ್ಕಿದ್ದರೆ ಡಿ.ಕೆ.ಶಿವಕುಮಾರ್ ಆರ್ಸಿಬಿ ಕಪ್ ಅನ್ನೇ ಕಿತ್ತುಕೊಂಡು ಓಡಿ ಹೋಗುವಂತಿದ್ದರು ಎಂದು ಲೇವಡಿ ಮಾಡಿದರು.
ಸಂಜೆ 4 ಗಂಟೆ ವೇಳೆ ಘಟನೆ ನಡೆದಿದೆ. ಕಾಲ್ತುಳಿತ ಮತ್ತು ಸಾವಿನ ಕುರಿತು ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತಿತ್ತು. ಸಂಜೆ 5 ಗಂಟೆವರೆಗೆ ನಾಡಿನ ದೊರೆಗೆ ಈ ವಿಷಯ ಗೊತ್ತೇ ಇರಲಿಲ್ಲ. ಕುಟುಂಬದ ಜೊತೆಗೆ ಸಿದ್ದರಾಮಯ್ಯ ಎಂಟಿಆರ್ ಹೊಟೇಲ್ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು. ಈ ಮೂಲಕ ಅವರು ಉದ್ಧಟತನದಿಂದ ವರ್ತಸಿದ್ದಾರೆ. ಇದೇನ ಸರಕಾರದ ಜವಾಬ್ದಾರಿ? ಎಂದು ಪ್ರಶ್ನಿಸಿದರು.
ಕಾಲ್ತುಳಿತಕ್ಕೆ ಅಭಿಮಾನಿಗಳು ಬಲಿಯಾದರೆ, ಕೈ ತುಳಿತಕ್ಕೆ ಪೊಲೀಸರು ಬಲಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡಲಾಗಿದೆ.ಇವರು ಜನಪ್ರಿಯತೆ ಹಿಂದೆ ಓಡುತ್ತಿರುವ ಹುಚ್ಚು ಕುದುರೆಗಳು. ಅಧಿಕಾರದಲ್ಲಿ ಇರುವವರೆಗೆ ರಾಜ್ಯದ ಘನತೆಗೆ ಧಕ್ಕೆ ತಪ್ಪುವುದಿಲ್ಲ. ಈಗ ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂರನ್ನು ದಿಲ್ಲಿಗೆ ಕರೆಸಿಕೊಂಡಿದೆ. ಆದರೆ ಹೈಕಮಾಂಡ್ ಕ್ರಮ ಕೈಗೊಳ್ಳುವಷ್ಟು ಗಟ್ಟಿ ಇದೆ ಎಂದೇನು ಅನಿಸುತ್ತಿಲ್ಲ. ದೇಹ ಬಾಲವನ್ನು ಅಲುಗಾಡಿಸಬೇಕು. ಆದರೆ ಇಲ್ಲಿ ಬಾಲವೇ ದೇಹವನ್ನು ಅಲುಗಾಡಿಸುತ್ತಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದರು.
ಘಟನೆ ಕುರಿತು ಬಹಿರಂಗ ಪತ್ರ ಬರೆದಿದ್ದೇನೆ. ಸಿಎಂ ತೇಜೋವಧೆ ಅಥವಾ ರಾಜಕೀಯ ಕಾರಣಕ್ಕೆ ಪತ್ರ ಬರೆದಿದ್ದಲ್ಲ. ನೊಂದ ಕುಟುಂಬದ ಸದಸ್ಯರ ಭಾವನೆ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗೆ ಮನದಟ್ಟು ಮಾಡಲು ಈ ಪತ್ರ ಬರೆಯಲಾಗಿದೆ. ಇದಕ್ಕೆ ಸಿಎಂ ಸ್ಪಂದಿಸುತ್ತಾರೆ ಎಂಬ ಭಾವನೆ ನನಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಶಿವರಾಜ್, ವಿನ್ಸೆಂಟ್, ರಾಮು, ಮಾಲತೇಶ್, ಮೋಹನ್ ರೆಡ್ಡಿ, ಕೆ.ವಿ. ಅಣ್ಣಪ್ಪ, ಗಣೇಶ್ ಬಿಳಕಿ, ದರ್ಶನ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.