ಬೇಸೂರು ಅಣುಸ್ಥಾವರ ಯೋಜನೆ ವಿರುದ್ಧ ಭುಗಿಲೆದ್ದ ಜನಾಕ್ರೋಶ; ಸಾಗರದ ಎಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆ

ಸಾಗರ: ತಾಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಸರಕಾರ ಅಧಿನ ಸಂಸ್ಥೆ ಎನ್.ಪಿ.ಸಿ.(ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್) ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ಹೋರಾಟದ ಮುಂದುವರಿದ ಭಾಗವಾಗಿ ಬುಧವಾರ ಬೇಸೂರು, ತುಮರಿ, ಬ್ಯಾಕೋಡು, ಹೆಗ್ಗೊಡು ಸೇರಿದಂತೆ ಈ ಭಾಗದ ನೂರಾರು ಗ್ರಾಮಸ್ಥರು ಬೃಹತ್ ಪಾದಯಾತ್ರೆ ನಡೆಸಿದರು.
ಬೇಸೂರಿನ ಬಸವಣ್ಣ ದೇವಸ್ಥಾನದಿಂದ ಸಾಗರ ಉಪವಿಭಾಗಾಧಿಕಾರಿ ಕಚೇರಿವರೆಗೂ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮತ್ತು ಕೂಡಲಿ ಮಠದ ಸಿದ್ದವೀರಸ್ವಾಮೀಜಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಈಗ ಸಂಕಷ್ಟದ ಕಾಲ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಜನ ಯಾವುದೇ ಪಕ್ಷ, ಪಂಗಡವಿಲ್ಲದೆ ಹೋರಾಡಬೇಕಿದೆ. ಈ ಮೂಲಕ ನಮ್ಮ ಬದುಕಿನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಆತಂಕ ಇನ್ನೂ ಸಾಗರ ತಾಲೂಕಿನ ಜನರನ್ನು ಕಾಡುತ್ತಿರುವಾಗಲೇ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವ ಸರಕಾರದ ಕ್ರಮ ಖಂಡನೀಯ ಎಂದು ಚನ್ನಬಸವ ಸ್ವಾಮೀಜಿ ಹೇಳಿದರು.
ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ನೆಲದ ಸಂಕಷ್ಟ ಬಗ್ಗೆ ಧ್ವನಿ ಎತ್ತಬೇಕು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಮೇಲ್ಮಟ್ಟದಲ್ಲಿ ಜನವಿರೋಧಿ ಯೋಜನೆಗಳನ್ನು ರೂಪಿಸಿ ನಮ್ಮ ಮೇಲೆ ಹೇರುವ ಕೆಲಸ ಮಾಡುತ್ತಾರೆ. ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕೆಂದು ಕರೆ ನೀಡಿದರು.
ಈಗಾಗಲೆ ಶರಾವತಿ ಸೇರಿದಂತೆ ಅನೇಕ ಜಲ ಯೋಜನೆಗಳಿಂದ ಮಲೆನಾಡು ಜನ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೇಸೂರು ಅಣು ವಿದ್ಯುತ್ ಯೋಜನೆ ಜಾರಿಗೆ ಅವಕಾಶ ಕೊಡದೆ ಹೋರಾಟ ಮಾಡಬೇಕಿದೆ. ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಬಿ.ಸ್ವಾಮಿರಾವ್ ಹೇಳಿದರು.
‘ಉರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿ’ ಎಂಬ ಘೋಷಣೆಯೊಂದಿಗೆ ಆರಂಭವಾದ ಪಾದಯಾತ್ರೆಯಲ್ಲಿ ‘ಅಯ್ಯೋಯ್ಯೋ ಬೇಡ್ವೇ ಬೇಡ... ಅಣು ಸ್ಥಾವರ ಯೋಜನೆ ಬೇಡ... ಏಸೂರು ಕೊಟ್ರೂ ಬೇಸೂರು ಕೊಡೆವು! ಎಂಬ ಹಾಡು ಮೊಳಗಿತು.
ಪಾದಯಾತ್ರೆಯು ಬೇಸೂರು, ಹುಲಿದೇವರಬನ, ಗೆಣಸಿನಕುಣಿ, ಆವಿನಹಳ್ಳಿ, ಕಾಗೇಹಳ್ಳ, ಹೊಸೂರು, ಚಿಪ್ಲಿ ಶಾಲೆ, ಇಕ್ಕೇರಿ ಸರ್ಕಲ್ ಹಾಗೂ ಸುಭಾಹಿತ್ ಬಿಲ್ಲಿಂಗ್ ಮಾರ್ಗವಾಗಿ ಸಾಗರ ಉಪವಿಭಾಗಾಧಿಕಾರಿ ಕಚೇರಿ ತಲುಪಿತು.
ಬೇಸೂರು ಅಣು ವಿದ್ಯುತ್ ಯೋಜನೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಇಂದೂಧರ ಗೌಡ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರಂಗಕರ್ಮಿ ಕೆ.ವಿ.ಅಕ್ಷರ, ಚರಕ ಸಂಸ್ಥೆಯ ಪ್ರಕಾಶ್ ಕುಗ್ವೆ, ಪ್ರಮುಖರಾದ ಪ್ರಸನ್ನ ಕೆರೆಕೈ, ತೀ.ನಾ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಮೈತ್ರಿ ಪಾಟೀಲ್, ದಿನೇಶ್ ಶಿರವಾಳ, ಸೀತಾರಾಮ ಕುರುವರಿ, ನಾಗೇಂದ್ರ ಸಾಗರ್, ಕೆ.ಜಿ.ಪ್ರಶಾಂತ್, ನವೀನ್ ಕೆ.ವಿ., ಅಖಿಲೇಶ್ ಚಿಪ್ಪಳಿ, ರೂಪಾ ಆವಿನಹಳ್ಳಿ, ನಾಗರಾಜ್, ಅಶೋಕ ಬೇಳೂರು, ತುಮರಿ ಜಿ.ಟಿ ಸತ್ಯನಾರಾಯಣ, ಬಂದಗದ್ದೆ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚರಕ ಸಂಸ್ಥೆ ಪ್ರತಿನಿಧಿಗಳು, ರೈತರು, ಪರಿಸರಾಸಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆ ಸಾಗಿ ಬರುವ ಗ್ರಾಮಗಳಲ್ಲಿ ಅಭೂತಪೂರ್ವವಾದ ಬೆಂಬಲ ದೊರೆಯಿತು. ಕೆಲವು ಗ್ರಾಮಗಳಲ್ಲಿ ಮಕ್ಕಳೂ ಪಾದಯಾತ್ರೆ ಜೊತೆ ಸಾಗಿ ಬಂದಿದ್ದು ವಿಶೇಷವಾಗಿತ್ತು.
ಯೋಜನೆ ವಿರೋಧಿಸಿ ಕೇಂದ್ರಕ್ಕೆ ಮನವಿ: ರಾಘವೇಂದ್ರ
ಲಿಂಗನಮಕ್ಕಿ ಜಲಾಶಯ ಸಂದರ್ಭದಲ್ಲಿ ಜಮೀನು ಕಳೆದುಕೊಂಡವರಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಇದು ರೈತರ ಉಳಿವಿಗಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟವಾಗಿದೆ. ಬೇಸೂರು ಅಣು ವಿದ್ಯುತ್ ಸ್ಥಾವರ ಬೇಡ ಎಂದು ಕೇಂದ್ರ ಸರಕಾರಕ್ಕೆ ನಾನು ಮನವಿ ಮಾಡುತ್ತೇನೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರಾಜ್ಯ ಸರಕಾರದ ಮೇಲೆ ಒತ್ತಡ ತರಲಿ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ತರದಂತೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ರೈತರ ಪರವಾಗಿ ಹೋರಾಟ: ಗೋಪಾಲಕೃಷ್ಣ ಬೇಳೂರು
ಸಂಸದರು ಕೇಂದ್ರದ ಹಂತದಲ್ಲಿ ಅಣು ವಿದ್ಯುತ್ ಸ್ಥಾವರ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಯೋಜನೆಗೆ ಒಪ್ಪಿಗೆ ನೀಡದಂತೆ ನಾನು ರಾಜ್ಯ ಸರಕಾರದ ಮನವಿ ಮಾಡಿದ್ದು, ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ. ರೈತರ ಪರವಾಗಿ ಯೋಜನೆ ವಿರುದ್ದ ಹೋರಾಟ ಮಾಡುತ್ತೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ, ಪ್ರಸ್ತಾವಿತ ಯೋಜನೆ ಜಾರಿಗೆ ತರಲು ಬಿಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಅಣು ಸ್ಥಾವರಕ್ಕೆ ಒಪ್ಪಿಗೆ ನೀಡಿಲ್ಲ: ಡಿಸಿ
ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಿಲ್ಲಾಡಳಿತದಿಂದ ಯಾವುದೇ ಪರವಾನಿಗೆ ನೀಡಿಲ್ಲ. ಮೌಖಿಕ ಚರ್ಚೆ ನಡೆದಿದೆಯೆ ವಿನಃ, ಲಿಖಿತ ರೂಪದಲ್ಲಿ ಯಾರೂ ಕೇಳಿಲ್ಲ, ನಾವು ಕೊಟ್ಟಿಲ್ಲ. ಎನ್.ಟಿ.ಪಿ.ಸಿ. ಕೆಲವು ಪ್ರದೇಶಗಳ ಬಗ್ಗೆ ಮಾಹಿತಿ ಕ್ರೋಢಿಕರಣಕ್ಕಾಗಿ ಕಂದಾಯ ಇಲಾಖೆಯಿಂದ ಮಾಹಿತಿ ಕೇಳಿದ್ದರು ಬಿಟ್ಟರೇ ಸರಕಾರದಿಂದ ಅಧಿಕೃತವಾಗಿ ಜಾಗ ಗುರುತಿಸಿ ಕಳಿಸಿ ಎಂದು ಕೇಳಿಲ್ಲ. ಸರಕಾರದಲ್ಲಿ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಅಣು ಸ್ಥಾವರ ವಿರೋಧಿ ಹೋರಾಟಕ್ಕೆ ಪರ್ಯಾವರಣ ಟ್ರಸ್ಟ್ ಬೆಂಬಲ
ಮಲೆನಾಡು ಅಣುಸ್ಥಾವರ ವಿರೋಧಿ ಹೋರಾಟ ವೇದಿಕೆಯ ಹೋರಾಟಕ್ಕೆ ಶಿವಮೊಗ್ಗ ನಗರ ಪರ್ಯಾವರಣ ಟ್ರಸ್ಟ್ ಬೆಂಬಲ ಸೂಚಿಸಿದೆ.
ಈ ಸಂಬಂಧ ಪರ್ಯಾವರಣ ಟ್ರಸ್ಟ್ ಸದಸ್ಯರು ಮತ್ತು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ಸಮಿತಿಯು ಸಭೆ ನಡೆಸಿ ಬೇಸೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಈ ಯೋಜನೆಯಿಂದ ಪರಿಸರ ಹಾಗೂ ಜನರ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿತು.
ಟ್ರಸ್ಟ್‌ನ ಗೌರವಾಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಶಿವಮೊಗ್ಗ ಸೇರಿದಂತೆ ಮಲೆನಾಡಿನ ರಕ್ಷಣೆಗಾಗಿ ಈ ಯೋಜನೆ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದರು.
ಪರಿಸರ ತಜ್ಞ ಡಾ. ಶ್ರೀಪತಿ ಎಲ್.ಕೆ. ಮಾತನಾಡಿ, ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಈ ಯೋಜನೆ ಪಶ್ಚಿಮ ಘಟ್ಟದ ಪ್ರದೇಶಕ್ಕೆ ಸೂಕ್ತವೇ ಅಲ್ಲ ಎಂದರು.
ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಎಂ. ಶಂಕರ್, ಪ್ರಮುಖರಾದ ಗಿರೀಶ್ ಪಟೇಲ್, ಪ್ರೊ.ಎ.ಎಸ್.ಚಂದ್ರಶೇಖರ್, ರಮೇಶ್ ಹೆಗ್ಡೆ, ಅರವಿಂದ ಪಾಟೀಲ್, ಪ್ರದೀಪ್ ಮಠದ್, ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಲೋಕೇಶಪ್ಪ, ಜಗದೀಶ್ ಮತ್ತಿತರರಿದ್ದರು.






