ಕಸಾಪದಲ್ಲಿ ಪಾರದರ್ಶಕ ಆಡಳಿತಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ : ಎಸ್.ಜಿ.ಸಿದ್ದರಾಮಯ್ಯ

ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್‌ನ ಸ್ವಾಯತ್ತತೆ ಮತ್ತು ಮೂಲ ಆಶಯಗಳನ್ನು ಉಳಿಸಿ, ಅದನ್ನು ಕನ್ನಡಿಗರ ಪರಿಷತ್ತಾಗಿ ಬೆಳೆಸುವ ಉದ್ದೇಶದಿಂದ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್‌ನ ಇತ್ತೀಚಿನ ಆಡಳಿತ ವೈಖರಿ ಮತ್ತು ಬೈಲಾ ತಿದ್ದುಪಡಿಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಆಶಯಗಳೊಂದಿಗೆ ಸ್ಥಾಪನೆಯಾದ ಪರಿಷತ್‌ಶತಮಾನಕ್ಕೂ ಹೆಚ್ಚು ಕಾಲ ತನ್ನ ಮೂಲ ಉದ್ದೇಶವನ್ನು ಉಳಿಸಿಕೊಂಡು ಬಂದಿದೆ. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಮೂಲ ಬೈಲಾಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ. ಸೇವಾ ಮನೋಭಾವದಿಂದ ನಿರ್ವಹಿಸಬೇಕಾದ ಅಧ್ಯಕ್ಷ ಸ್ಥಾನವನ್ನು ಅಧಿಕಾರದ ಕುರ್ಚಿಯಂತೆ ಪರಿಗಣಿಸಿರುವುದರಿಂದ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ಮಹೇಶ್ ಜೋಶಿ ಅವರ ಆಡಳಿತಾವಧಿಯಲ್ಲಿ ಪರಿಷತ್‌ನ ಚುನಾವಣೆಯನ್ನು ಪಕ್ಷದ ರಾಜಕಾರಣದ ಮಾದರಿಯಲ್ಲಿ ನಡೆಸಲಾಗಿದೆ ಎಂದು ದೂರಿದ ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷರ ಅಧಿಕಾರಾವಧಿಯನ್ನು ಐದು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸಬೇಕು. ಕನ್ನಡ ಸಾಹಿತ್ಯ, ಸಂಸ್ಕೃತಿಯ ಜತೆಗೆ ಕೃಷಿ ಸೇರಿದಂತೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳ ಕುರಿತು ಚರ್ಚಿಸುವ ವೇದಿಕೆಯಾಗಿ ಪರಿಷತ್ ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದರು.
ಜಾಣಗೆರೆ ವೆಂಕಟರಾಮಯ್ಯ ಅವರು ಕನ್ನಡಪರ ಹೋರಾಟಗಾರ, ಪತ್ರಕರ್ತ, ಕವಿ, ಕಾದಂಬರಿಕಾರ ಹಾಗೂ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಅವರು ಕಳಂಕರಹಿತ ವ್ಯಕ್ತಿತ್ವ ಹೊಂದಿದ್ದಾರೆ. ಹೀಗಾಗಿ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯದೊಂದಿಗೆ ಸಮಾನ ಮನಸ್ಕರು ಅವರನ್ನು ಆಯ್ಕೆ ಮಾಡಿದ್ದಾರೆ.ಕಸಾಪ ಸದಸ್ಯರು ಜಾಣಗೆರೆ ವೆಂಕಟರಾಮಯ್ಯ ಅವರನ್ನು ಆಯ್ಕೆ ಮಾಡುವ ಮೂಲಕ ಸಂಸ್ಥೆಯ ಸ್ವಾಯತ್ತತೆ ಮತ್ತು ಮೂಲ ಆಶಯಗಳನ್ನು ಸಂರಕ್ಷಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಪರಿಷತ್‌ನ ಸ್ವಾಯತ್ತತೆ, ಪಾರದರ್ಶಕ ಆಡಳಿತ ಮತ್ತು ಸಾಹಿತ್ಯ ಚಟುವಟಿಕೆಗಳ ಪುನಃಶ್ಚೇತನಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಂಜುನಾಥ್, ಬಿ.ಚಂದ್ರೇಗೌಡ, ಕೆ.ಪಿ.ಶ್ರೀಪಾಲ್, ಜಿ.ವಿ. ಸಂಗಮೇಶ್ವರ್, ಕೆ.ಜಿ.ವೆಂಕಟೇಶ್, ದೇವೇಂದ್ರ, ಸೂರ್ಯ ಪ್ರಕಾಶ್, ಅಂಬಿಕಾ, ತಿಮ್ಮಪ್ಪ, ಮಂಜುಳಾ ರಾಜು, ಅಕ್ಷತಾ ಹುಂಚದಕಟ್ಟೆ, ಕೃಷ್ಣಮೂರ್ತಿ ಹಿಳ್ಳೋಡಿ, ಕೆ.ದೇವೇಂದ್ರಯ್ಯ, ಎಂ. ಎಂ. ಸ್ವಾಮಿ, ಮಹಾದೇವಿ, ಅನಿಲ್ ಕುಮಾರ್, ನಾರಾಯಣ ಇದ್ದರು.






