ಸಾಗರ | ಕ್ಷುಲ್ಲಕ ಕಾರಣಕ್ಕೆ ವೃದ್ದೆಯನ್ನು ಮರಕ್ಕೆ ಕಟ್ಟಿ ಥಳಿತ: ದೂರು ದಾಖಲು

ಸಾಗರ : ಕ್ಷುಲ್ಲಕ ಕಾರಣಕ್ಕೆ ವೃದ್ಧೆಯೊಬ್ಬರನ್ನು ಮರಕ್ಕೆ ಕಟ್ಟಿ ಮಹಿಳೆಯೊಬ್ಬರು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ವೃದ್ಧೆಯೊಬ್ಬರಿಗೆ ಮನೆಯ ಮುಂದೆ ಕಸ ಹಾಕಬೇಡಿ ಎಂದು ಮನೆಯ ಪಕ್ಕದ ನಿವಾಸಿ ಪ್ರೇಮಾ ಎಂಬ ಮಹಿಳೆಗೆ ಹೇಳಿದ್ದರೆನ್ನಲಾಗಿದೆ. ಇದೇ ಕ್ಷುಲ್ಲಕ ವಿಚಾರಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಾಕಿ ಪ್ರೇಮಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕಾಗಮಿಸಿದ ವೃದ್ಧೆಯ ಪುತ್ರ, ಕಂಬಕ್ಕೆ ಕಟ್ಟಿ ಹಾಕಿದ ತಾಯಿಯನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಳಿಕ ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದರು. ಆದರೆ, ಯಾರೂ ನ್ಯಾಯ ಕೊಡಿಸಲು ಮುಂದಾಗಲಿಲ್ಲ ಎಂದು ದೂರಿದ್ದಾರೆ.
ಜೂ.29ರಂದು ಪುತ್ರ, ತಾಯಿಯೊಂದಿಗೆ ಆನಂದಪುರ ಪೊಲೀಸ್ ಠಾಣೆಗೆ ತೆರಳಿ ಹಲ್ಲೆ ಮಾಡಿದ ಪ್ರೇಮಾ, ಹಲ್ಲೆಗೆ ಉತ್ತೇಜನ ನೀಡಿದ ಆರೋಪದಲ್ಲಿ ಮಂಜುನಾಥ್ ಹಾಗೂ ದರ್ಶನ್ ಎಂಬುವರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಕ್ಷಣೆ ನೀಡಿ :ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೃದ್ಧೆಯ ಪುತ್ರ, ʼವಯಸ್ಸಾದ ನನ್ನ ತಂದೆ-ತಾಯಿಗೆ ಪ್ರಾಣ ಭಯವಿದ್ದು, ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡಬೇಕು. ಹಲ್ಲೆಗೊಳಗಾದ ನನ್ನ ತಾಯಿ ತೀವ್ರ ನೋವಿನಿಂದ ನರಳುತ್ತಿದ್ದರು. ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇನೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆʼ ಎಂದು ತಿಳಿಸಿದ್ದಾರೆ.