Sagara | ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆಗೆ ವಿರೋಧ; ರೈತ ಸಂಘದಿಂದ ಸಾಗರದಲ್ಲಿ ಬೃಹತ್ ಪ್ರತಿಭಟನೆ

ಸಾಗರ : ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಹಾಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂತಿಮವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಎಚ್.ಹಾಲಪ್ಪ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಹೆಸರಿನಲ್ಲಿ ಮಲೆನಾಡು ರೈತರ ಬದುಕಿಗೆ ಕೊಳ್ಳಿ ಇಡುವ ಸಂಸ್ಕೃತಿಯನ್ನು ಯಾವತ್ತೂ ಸಹಿಸುವುದಿಲ್ಲ. ರಾಜ್ಯದ 20,668 ಎಕರೆ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುತ್ತಿದ್ದು, 1,449 ಹಳ್ಳಿಗಳು ಸೇರುತ್ತಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ 449 ಹಳ್ಳಿಗಳೂ ಸೇರುತ್ತಿದೆ. ಮಲೆನಾಡು ಭಾಗದ ರೈತರು ಇದನ್ನು ಗಂಭೀರವಾಗಿ ಗಮನಿಸಬೇಕೆಂದು ಸಲಹೆ ನೀಡಿದರು.
ಕೇರಳಂ ರಾಜ್ಯದಲ್ಲಿ ಸರಕಾರ, ಪಕ್ಷಗಳು, ಸರಕಾರಿ ನೌಕರರು ಒಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಿದ್ದರಿಂದ ಪರಿಷ್ಕೃತ ವರದಿ ಜಾರಿಗೊಳಿಸಲಾಗಿತ್ತು. ಅಲ್ಲಿ ದೈಹಿಕವಾಗಿ ಸಮೀಕ್ಷೆ ನಡೆಸಿ ಸಾಕಷ್ಟು ಪ್ರದೇಶವನ್ನು ಕೈಬಿಡಲಾಗಿತ್ತು. ಕರ್ನಾಟಕದಲ್ಲಿಯೂ ಎಲ್ಲರೂ ಒಟ್ಟಾಗಿ ವರದಿ ವಿರುದ್ಧ ಧ್ವನಿ ಎತ್ತಬೇಕೆಂದು ಹಾಲಪ್ಪ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಜಿಲ್ಲೆಗೆ ಶಾಪವಾಗಲಿದೆ. ಕಸ್ತೂರಿ ರಂಗನ್ ವರದಿ ಯಥಾವತ್ತು ಜಾರಿಯಾದರೆ ಮಲೆನಾಡು ಜನರಿಗೆ ಮರಣ ಶಾಸನವಾಗಲಿದೆ. ಯೋಜನೆ ವಿರೋಧಿಸಿ ನಿರಂತರ ಹೋರಾಟ ಇದ್ದು, ರೈತ ಸಂಘ ಎಲ್ಲ ಹೋರಾಟಕ್ಕೂ ಕೈಜೋಡಿಸಲಿದೆ. ಪಕ್ಷಬೇಧ ಮರೆತು ಹೋರಾಟ ಮಾಡಿದರೆ ಮಾತ್ರ ಕಸ್ತೂರಿ ರಂಗನ್ ವರದಿಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
ಕಸ್ತೂರಿ ರಂಗನ್ ವರದಿ ಕುರಿತು ಪುನರ್ ಪರಿಶೀಲನೆ ಮಾಡಬೇಕು. ಜನವಸತಿ ಪ್ರದೇಶವನ್ನು ಹೊರಗಿಟ್ಟು ದೈಹಿಕವಾಗಿ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು. ಕೇಂದ್ರ ಸರಕಾರಕ್ಕೆ ವರದಿ ಜಾರಿಯಾದರೆ ರಾಜ್ಯದಲ್ಲಿ ಆಗುವ ಸಮಸ್ಯೆಗಳ ಕುರಿತು ಕೇಂದ್ರಕ್ಕೆ ಮುಖ್ಯಮಂತ್ರಿಯವರು ಮನವಿ ಮಾಡಿಕೊಡಬೇಕೆಂದು ದಿನೇಶ್ ಶಿರವಾಳ ಒತ್ತಾಯಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ಚೇತನರಾಜ ಕಣ್ಣೂರು, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಪ್ರಸನ್ನ ಕೆರೆಕೈ, ಸೋಮಶೇಖರ್, ಸಂತೋಷ್ ಚಿಕ್ಕನೆಲ್ಲೂರು, ಸುನೀಲ್, ಚಂದ್ರು ಪೂಜಾರಿ ಹಾಗೂ ಇತರರು ಭಾಗವಹಿಸಿದ್ದರು.
"ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಯವರು ವಿಶೇಷ ಅಧಿವೇಶನ ಕರೆಯುತ್ತೇನೆ ಎಂದಿರುವುದನ್ನು ನಾನು ಸ್ವಾಗತಿಸುತ್ತೇನೆ. ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸದರೆ ಮತ್ತೊಂದು ರೂಪದಲ್ಲಿ ನಮ್ಮನ್ನು ಸುತ್ತುವರಿಯುತ್ತದೆ. ಜನ ವಸತಿ, ಕೃಷಿ ಚಟುವಟಿಕೆ ಸೇರಿ ಉಪಯೋಗಕ್ಕೆ ಬರುವ ಭೂಮಿಯನ್ನು ಹೊರತುಪಡಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಿ, ಮಲೆನಾಡು ರೈತರ ಆತಂಕ ದೂರ ಮಾಡಬೇಕು"
ಎಚ್.ಹಾಲಪ್ಪ, ಮಾಜಿ ಸಚಿವ
ಬ್ಯಾರಿಕೇಡ್ ಕಿತ್ತೆಸೆದ ರೈತರು
ಪ್ರತಿಭಟನಾ ಮೆರವಣಿಗೆ ಉಪ ವಿಭಾಗಾಧಿಕಾರಿ ಕಚೇರಿ ಬಾಗಿಲಿಗೆ ಬರದಂತೆ ಪೊಲೀಸ್ ಇಲಾಖೆ ಆವರಣದಲ್ಲಿ ಬ್ಯಾರಿಕೇಡ್ ಹಾಕಿತ್ತು. ಇದರಿಂದ ಅಕ್ರೋಶಗೊಂಡ ರೈತರು ಬ್ಯಾರಿಕೇಡ್ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಬ್ಯಾರಿಕೇಡ್ ಹಾಕಿ ಅವಮಾನಿಸಲಾಗುತ್ತಿದೆ ಎಂದ ರೈತರು, ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.






