ಸಾಗರ | ಕಾರು-ಪಿಕಪ್ ನಡುವೆ ಅಪಘಾತ : ಓರ್ವ ಮೃತ್ಯು, ಎಂಟು ಮಂದಿಗೆ ಗಾಯ

ಸಾಗರ : ತಾಲ್ಲೂಕಿನ ತಾಳಗುಪ್ಪ ಸಮೀಪದ ಬಲೆಗಾರು ತಿರುವಿನಲ್ಲಿ ಓಮ್ನಿ ಕಾರು ಮತ್ತು ಪಿಕಪ್ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಎಂಟು ಜನ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಒಂಬತ್ತು ಜನರು ಜೋಗ ನೋಡಲು ಬರುತ್ತಿದ್ದಾಗ ತಾಳಗುಪ್ಪದಿಂದ ಸಾಗರಕ್ಕೆ ಬರುತ್ತಿದ್ದ ಪಿಕಪ್ ವಾಹನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಶೆಟ್ಟಿಕೊಪ್ಪದ ಶೇಖರ್ (40) ಎಂಬ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಎರಡು ವರ್ಷದ ಮಗು ಸೇರಿದಂತೆ ಉಳಿದ ಏಳು ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಮತ್ತು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಸಾಗರಕ್ಕೆ ಬರುತ್ತಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ವಾಹನ ನಿಲ್ಲಿಸಿ ಗಾಯಗೊಂಡವರ ನೆರವಿಗೆ ಬಂದಿದ್ದಾರೆ. ಎಲ್ಲರನ್ನೂ ಸಾಗರ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸುವ ಜೊತೆಗೆ ಎಂಟು ಜನರನ್ನು ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.







