ಬೆದರಿದ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ : ಶಿವಮೊಗ್ಗ ದಸರಾ ಜಂಬೂಸವಾರಿ ಅರ್ಧಕ್ಕೆ ಮೊಟಕು

ಶಿವಮೊಗ್ಗ: ನಗರದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಾರಿ ತಪ್ಪಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಘಟನೆ ನಡೆದಿದೆ.
ನಗರದ ಕೋಟೆ ರಸ್ತೆಯಲ್ಲಿರುವ ಶಿವಪ್ಪ ನಾಯಕ ಅರಮನೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಸಾಗುತ್ತಿದ್ದ ಸೋಮಣ್ಣ ಆನೆ ಏಕಾಏಕಿ ದಾರಿ ಬದಲಿಸಿ ಹಿಂದಕ್ಕೆ ತೆರಳಿತು. ಈ ವೇಳೆ ಚಾಮುಂಡೇಶ್ವರಿ ಮೂರ್ತಿ ಇರಿಸಲಾಗಿದ್ದ ಬೆಳ್ಳಿಯ ಅಂಬಾರಿ ಕೆಳಕ್ಕೆ ಬಿದ್ದು ಹಾನಿಗೊಳಗಾಯಿತು. ಆನೆ ಸಾಗಿದ ಸಂದರ್ಭದಲ್ಲಿ ಎರಡು ಕಾರುಗಳು ಹಾಗೂ ಮೂರು ಬೈಕ್‌ಗಳು ಹಾನಿಗೊಳಗಾಗಿವೆ.
ಆನೆಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟರು. ಆನೆ ದಾರಿ ತಪ್ಪಿ ಸಾಗುತ್ತಿದ್ದುದನ್ನು ಕಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಭಯಭೀತರಾಗಿ ಚದುರಿದರು.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ನಿಲ್ಲಿಸಲಾಯಿತು. ಆನೆಯನ್ನು ನಿಯಂತ್ರಣಕ್ಕೆ ಪಡೆಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದರು.




