ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ; ನಿಯಾಸ್ ಅಧ್ಯಯನ ವರದಿ ತಿರಸ್ಕರಿಸಲು ಆಗ್ರಹ

ಶಿವಮೊಗ್ಗ : ರಾಜ್ಯ ಸರಕಾರದ ವತಿಯಿಂದ ಶರಾವತಿ ಕಣಿವೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 2,000 ಮೆಗಾ ವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ನಿಯಾಸ್(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್)ಸಂಸ್ಥೆ ನೀಡಿರುವ ಅಧ್ಯಯನ ವರದಿಯನ್ನು ತಿರಸ್ಕರಿಸಬೇಕೆಂದು ಮಲೆನಾಡಿನ ಪರಿಸರ ತಜ್ಞರ ಸಮಿತಿ ಒತ್ತಾಯಿಸಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯವಾಗಿ ಹಾಗೂ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಎಚ್.ಎಸ್. ಸಿಂಗ್ ನೇತೃತ್ವದಲ್ಲಿ ತಜ್ಞರ ಪರಿಶೀಲನಾ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯು ಸಾಗರ, ಜೋಗ, ಗೇರುಸೊಪ್ಪಹಾಗೂ ಹೊನ್ನಾವರ ಪ್ರದೇಶಗಳಿಗೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿತ್ತು. ಯೋಜನೆಯಿಂದ ಅಪಾರ ಜೀವವೈವಿಧ್ಯ ನಾಶ, ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿ, ಭೂಕುಸಿತದ ಭೀತಿ ಹಾಗೂ ಭಾರಿ ಪ್ರಮಾಣದ ಅರಣ್ಯ ನಾಶವಾಗಲಿದೆ ಎಂಬ ಕಾರಣ ನೀಡಿ, ಯೋಜನೆಗೆ ಅನುಮತಿ ನೀಡಬಾರದು ಎಂದು ಸಮಿತಿ ವರದಿ ನೀಡಿತ್ತು. ಆದರೆ, ಈ ವರದಿಯನ್ನು ಮರು ವಿಮರ್ಶೆ ಮಾಡಲು ಬೆಂಗಳೂರಿನ ನಿಯಾಸ್ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ನಿಯಾಸ್ ಸಂಸ್ಥೆಯು ಈ ಯೋಜನೆ ಜಾರಿಯಾಗಬೇಕು ಎಂದು ವರದಿ ಸಲ್ಲಿಸಿದೆ.
ನಿಯಾಸ್ ನೀಡಿದ ವರದಿಯನ್ನು ವಿಶ್ಲೇಷಿಸಿರುವ ದೇಶದ ಪರಿಸರ ತಜ್ಞರು ಒಳಗೊಂಡ ನಾಗರಿಕ ಸ್ವತಂತ್ರ ತಜ್ಞ ಸಮಿತಿಯು 55 ಪುಟಗಳ ಸಮಗ್ರ ವರದಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿದೆ.
ಶರಾವತಿಯಂತಹ ಅಭಯಾರಣ್ಯದಲ್ಲಿ ಈ ಯೋಜನೆ ಏಕೆ ಬೇಕು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಅಷ್ಟೇ ಅಲ್ಲದೆ, ಭೂಗರ್ಭದಲ್ಲಿ ವಿದ್ಯುತ್ ಕೇಂದ್ರ ಸ್ಥಾಪನೆ, ಸುರಂಗ ನಿರ್ಮಾಣ, ಅಂತರ್ಜಲ ಬದಲಾವಣೆ ಹಾಗೂ ಭೂ ಕುಸಿತದಂತಹ ಗಂಭೀರ ಅಪಾಯಗಳ ಬಗ್ಗೆ ವರದಿಯಲ್ಲಿ ಉಲ್ಲೇಖವೇ ಇಲ್ಲ. ಯೋಜನೆಗೆ ಪರ್ಯಾಯ ಸಾಧ್ಯತೆಗಳ ಬಗ್ಗೆ ಯಾವುದೇ ಚರ್ಚೆ ಮಾಡದೇ ತೇಪೆ ಸಾರುವ ಕೆಲಸ ಮಾಡಲಾಗಿದೆ ಎಂದು ನಾಗರಿಕ ಸ್ವತಂತ್ರ ತಜ್ಞ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ನಾಗರಿಕ ಸ್ವತಂತ್ರ ತಜ್ಞ ಸಮಿತಿಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಪಶ್ಚಿಮ ಘಟ್ಟ ಕಾರ್ಯಪಡೆಯ ಸಂಚಾಲಕ ಕೆ.ಗಣಪತಿ, ಮುಂಬೈನ ಕಲ್ಪವೃಕ್ಷ ಸಂಸ್ಥೆಯ ಆಶೀಷ್ ಕೊಠಾರಿ, ನಿವೃತ್ತ ಹಿರಿಯ ಅರಣ್ಯಾಧಿಕಾರಿ ಬಿ.ಕೆ.ಸಿಂಗ್, ವನ್ಯಜೀವಿ ತಜ್ಞ ದೇಬಾದಿತ್ಯ ಸಿನ್ಹಾ, ಬೆಳಗಾವಿಯ ಪರಿಸರ ಹೋರಾಟಗಾರ ದಿಲೀಪ್ ಕಾಮತ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ, ಪರಿಸರವಾದಿ ಜೋಸೆಫ್ ಹೂವರ್, ಸಂಶೋಧಕರಾದ ರಾಜೇಶ್ ರಾಮಕೃಷ್ಣನ್, ನಿರ್ಮಲಾ ಗೌಡ, ಶಿವಮೊಗ್ಗದ ಎಲ್.ಶ್ರೀಪತಿ, ಐಐಟಿ ಧಾರವಾಡದ ಗೌರವ ಪ್ರಾಧ್ಯಾಪಕ ಶ್ರೀಪಾದ, ವಿಜ್ಞಾನಿ ಸುಭಾಸ್ ಚಂದ್ರನ್, ಕಾನಪುರದ ಸುಧಿರ ಶೇಷಾದ್ರಿ, ಹಿರಿಯ ಪರಿಸರ ತಜ್ಞ ಎ.ಎನ್.ಯಲ್ಲಪ್ಪರೆಡ್ಡಿ, ರವಿ ಚೋಪ್ರಾ, ಸಾಗರ ಧಾರಾ ಹಾಗೂ ಸುರತ್ಕಲ್ನ ಶ್ರೀಕುಮಾರ್ ತಜ್ಞರ ಸಮಿತಿಯಲ್ಲಿದ್ದಾರೆ.
ತಪ್ಪು ಮಾಹಿತಿಗಳ ಉಲ್ಲೇಖ
ನಿಯಾಸ್ ನೀಡಿರುವ ವರದಿಯು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದ್ದು, ವರದಿಯಲ್ಲಿ ತಪ್ಪುಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಸಂಸ್ಥೆ ತನಗೆ ವಹಿಸಿದ ಅಧ್ಯಯನದ ಜವಾಬ್ದಾರಿ ಬಿಟ್ಟು, ದೇಶಕ್ಕೆ ವಿದ್ಯುತ್ ಕೊರತೆ ಇದೆ ಮತ್ತು ಶಕ್ತಿಯ ಅಗತ್ಯವಿದೆ ಎಂಬ ನೆಪವೊಡ್ಡಿ ಯೋಜನೆಯನ್ನು ಸಮರ್ಥಿಸಿ ಕೊಂಡಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.






