ಶಿಕಾರಿಪುರ: ಶಾಲೆಯಲ್ಲೇ ಶಿಕ್ಷಕ ಆತ್ಮಹತ್ಯೆ

ಶಿವಮೊಗ್ಗ: ಶಾಲೆಯಲ್ಲೇ ನೇಣು ಬಿಗಿದುಕೊಂಡು ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕಿನ ಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕರನ್ನು ಧನಂಜಯಪ್ಪ (51) ಎಂದು ಗುರುತಿಸಲಾಗಿದೆ.
ತರಗತಿ ಕೊಠಡಿಯಲ್ಲಿ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಳಿಕ ಧನಂಜಯಪ್ಪ ಅವರು ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ. ಕೆಲ ಸಮಯದ ನಂತರ ಸಹ ಶಿಕ್ಷಕರು ವಿಷಯ ಗಮನಿಸಿ, ಅವರನ್ನು ಕೂಡಲೇ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೂಲತಃ ಹೊನ್ನಾಳಿಯ ಜೀನಹಳ್ಳಿಯವರಾದ ಧನಂಜಯಪ್ಪ ಅವರು ಹೊನ್ನಾಳಿಯಿಂದ ಬಳೂರು ಶಾಲೆಗೆ ಪ್ರತಿದಿನ ಓಡಾಡುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಬಳೂರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







