Shivamogga | ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ; 177 ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : gemini AI
ಶಿವಮೊಗ್ಗ : ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾದ್ಯಂತ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 177 ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 82 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ 76 ಜನ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ 27(ಬಿ) ಸೆಕ್ಷನ್ ಅಡಿ 74 ಪ್ರಕರಣಗಳು ದಾಖಲಿಸಲಾಗಿದೆ.
ಅದೇ ರೀತಿ, ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ ಹಾಗೂ ಹಸಿ ಗಾಂಜಾ ಬೆಳೆಯುತ್ತಿದ್ದ 12 ಜನ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ 8(ಸಿ), 20(ಬಿ), 20(ಎ) ಸೆಕ್ಷನ್ಗಳ ಅಡಿ 8 ಪ್ರಕರಣಗಳು ದಾಖಲಾಗಿವೆ.
ನವೆಂಬರ್ ತಿಂಗಳಲ್ಲಿ ಒಟ್ಟು 4,91,500 ರೂ. ಮೌಲ್ಯದ 4 ಕೆಜಿ 476 ಗ್ರಾಂ ಒಣ ಗಾಂಜಾ, 370 ಗ್ರಾಂ ಹಸಿ ಗಾಂಜಾ ಹಾಗೂ 26 ಗ್ರಾಂ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಸಹ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಒಟ್ಟು 95 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ 90 ಜನ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ 27(ಬಿ) ಸೆಕ್ಷನ್ ಅಡಿ 86 ಪ್ರಕರಣಗಳು ದಾಖಲಾಗಿವೆ. ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸಾಗಾಟ ನಡೆಸುತ್ತಿದ್ದ 15 ಜನ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ 8(ಸಿ), 20(ಬಿ) ಸೆಕ್ಷನ್ಗಳ ಅಡಿ 9 ಪ್ರಕರಣಗಳು ದಾಖಲಿಸಲಾಗಿದೆ.
ಡಿಸೆಂಬರ್ನಲ್ಲಿ ಒಟ್ಟು 4,51,500 ರೂ. ಮೌಲ್ಯದ 8 ಕೆಜಿ 969 ಗ್ರಾಂ ಒಣ ಗಾಂಜಾ ಅನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿರ್ಮೂಲನಕ್ಕಾಗಿ ಮುಂದೆಯೂ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ತಿಳಿಸಿದ್ದಾರೆ.







