Shivamogga | ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ : ಆರೋಪಿ ಕಾಲಿಗೆ ಗುಂಡೇಟು

ರೌಡಿಶೀಟರ್ ಮಧು ಅಲಿಯಾಸ್ ಹನುಮಂತು
ಶಿವಮೊಗ್ಗ : ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ರೌಡಿಶೀಟರ್ ಮಧು ಅಲಿಯಾಸ್ ಹನುಮಂತು ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ನಗರದ ಗಾಂಧಿ ಬಜಾರ್ನ ಮೊಹಲ್ಲಾ ಬಳಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಜೂನ್ 12ರಂದು ಇಸ್ಪೀಟ್ ಆಟವಾಡಿಸುತ್ತಿದ್ದ ರೌಡಿಶೀಟರ್ ನರಸಿಂಹನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್ ಹಾಗೂ ಶಬರೀಶ್ ಎಂಬ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು.
ರವಿವಾರ(ಜೂ.14) ಆರೋಪಿಗಳನ್ನು ಮಹಜರು ನಡೆಸಲು ಹೊಳೆಬೆನವಳ್ಳಿಗೆ ಕರೆದೊಯ್ದಾಗ, ಪ್ರಮುಖ ಆರೋಪಿ ರೌಡಿಶೀಟರ್ ಮಧು ತಪ್ಪಿಸಿಕೊಳ್ಳುವ ಉದ್ದೇಶದಿಂದ ಕ್ರೈಮ್ ವಿಭಾಗದ ಪೊಲೀಸ್ ಸಿಬ್ಬಂದಿ ಅಂಜನಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ಎಚ್ಚರಿಕೆ ನೀಡಿದರೂ ಕೇಳದಿದ್ದಾಗ, ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿ ಮಧು ನನ್ನು ಮೆಗ್ಗಾನ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಅಂಜನಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.






