Shivamogga | ಮನೆಯೊಂದರ ಶೌಚಾಲಯದಲ್ಲಿ ಸ್ಫೋಟ; ಸಾಕು ನಾಯಿ ಸಾವು

ಸಾಂದರ್ಭಿಕ ಚಿತ್ರ | PC : Image by starline on Magnific
ಶಿವಮೊಗ್ಗ: ಮನೆಯ ಹಿಂಭಾಗದ ಶೌಚಾಲಯದಲ್ಲಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳು ಸ್ಫೋಟಗೊಂಡ ಪರಿಣಾಮ ಶೌಚಾಲಯ ಕೊಠಡಿಗೆ ಹಾನಿಯಾಗಿದ್ದು, ಮನೆಯ ಸಾಕು ನಾಯಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಹಿರೇಚೌಟಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಹಿರೇಚೌಟಿ ಗ್ರಾಮದ ಮಹಾದೇವಪ್ಪ ಎಂಬುವವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.
ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಪೊಲೀಸರು ಸಂಜೆ 4 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮನೆಯ ಹಿಂಭಾಗದಲ್ಲಿದ್ದ ಶೌಚಾಲಯದ ಮೇಲ್ಬಾವಣಿ ಹಾಗೂ ಗೋಡೆಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ. ಸ್ಫೋಟದ ಪರಿಣಾಮ ಸಾಕು ನಾಯಿಗೂ ಗಾಯಗಳಾಗಿದ್ದು, ಅದು ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ಸ್ಥಳೀಯರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದಾಗ, ಹಿರೇಚೌಟಿ ಗ್ರಾಮದ ಅರುಣ್ ಹಾಗೂ ಅವರ ತಂದೆ ಮಹಾದೇವಪ್ಪ ಸೇರಿದಂತೆ ಇತರರು ಯಾವುದೋ ಉದ್ದೇಶಕ್ಕಾಗಿ ಸ್ಫೋಟಕ ವಸ್ತುಗಳನ್ನು ಎಲ್ಲಿಂದಲೋ ತಂದು ಮನೆಯ ಹಿಂಭಾಗದ ಶೌಚಾಲಯದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಶೇಖರಿಸಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ಫೋಟ ಸಂಭವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ದೊರೆತಿದೆ.
ಘಟನೆಯ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಪೊಲೀಸರು, ಸ್ಥಳದಲ್ಲಿ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದಾರೆ. ಸ್ಫೋಟಕ ವಸ್ತುಗಳನ್ನು ನಿರ್ಲಕ್ಷ್ಯದಿಂದ ಸಂಗ್ರಹಿಸಿ ಇಟ್ಟಿರುವ ಆರೋಪದ ಸಂಬಂಧ ಅರುಣ್, ಅವರ ತಂದೆ ಮಹಾದೇವಪ್ಪ ಹಾಗೂ ಇತರರ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ






