ತ್ಯಾವರೆಕೊಪ್ಪ: ನಾಲ್ಕು ಸಿಂಹದ ಮರಿಗಳ ಸಾವು

ಸಾಂದರ್ಭಿಕ ಚಿತ್ರ | PC : Image by wirestock on Magnific
ಶಿವಮೊಗ್ಗ : ಇತ್ತೀಚೆಗೆ ಜನಿಸಿದ್ದ ನಾಲ್ಕು ಸಿಂಹದ ಮರಿಗಳು ಸಾವಿಗೀಡಾದ ಘಟನೆ ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಹುಲಿಸಿಂಹಧಾಮದಲ್ಲಿ ನಡೆದಿದೆ.
ಅಳಿವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಇಂದೋರ್ನಿಂದ ‘ಶಿವ’ ಹಾಗೂ ‘ಸಾರಾ’ ಏಶ್ಯಟಿಕ್ ಸಿಂಹಗಳನ್ನು ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿದ್ದು, ಈ ಪೈಕಿ ಸಾರಾ ಹೆಸರಿನ ಸಿಂಹ 4 ಮರಿಗಳಿಗೆ ಜನ್ಮ ನೀಡಿತ್ತು.
ಜನಿಸಿದ ಎರಡು ದಿನಗಳಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ. ಸಿಂಹಿಣಿ ಸಾರಾ ತಾಯ್ತನದ ಕೊರತೆಯಿಂದ ಮರಿಗಳಿಗೆ ಸರಿಯಾಗಿ ಹಾಲು ನೀಡದೇ ನಿರ್ಲಕ್ಷ್ಯದಿಂದ ಮರಿಗಳು ಮೃತಪಟ್ಟಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಸಾರಾ’ ಸಿಂಹಿಣಿಗೆ ಇದು ಮೊದಲ ಗರ್ಭಧಾರಣೆಯಾಗಿತ್ತು. ಮೊದಲ ಬಾರಿಗೆ ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿಗಳಲ್ಲಿ ಕೆಲವೊಮ್ಮೆ ನವಜಾತ ಮರಿಗಳನ್ನು ಪೋಷಿಸುವ ಸ್ವಾಭಾವಿಕ ವರ್ತನೆ ಸಮರ್ಪಕವಾಗಿ ವ್ಯಕ್ತವಾಗದಿರುವ ಸಾಧ್ಯತೆ ಇದೆ. ಸಾರಾ ಮರಿಗಳಿಗೆ ಅಗತ್ಯ ಪ್ರಮಾಣದಲ್ಲಿ ಹಾಲುಣಿಸದ ಹಿನ್ನೆಲೆಯಲ್ಲಿ ಅವು ನಿತ್ರಾಣಗೊಂಡಿದ್ದು, ಸೂಕ್ತ ಪೋಷಣೆ ದೊರೆಯದಿರುವುದು ಅವುಗಳ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




