Shivamogga | ಜಮೀನು ಖಾತೆ ವಿಳಂಬಕ್ಕೆ ಆಕ್ರೋಶ; ಉಪವಿಭಾಗಾಧಿಕಾರಿ ಕಚೇರಿ ಬಳಿ ಮರವೇರಿ ರೈತನಿಂದ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನಿನ ಮಂಜೂರಾತಿ ಹಾಗೂ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ರೈತರೊಬ್ಬರು ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ರಾಮಿನಕೊಪ್ಪ ಗ್ರಾಮದ ರೈತ ನಾಗರಾಜ್ ಎಂಬವರು ಸುಮಾರು 75 ಅಡಿ ಎತ್ತರದ ಮರ ಏರಿ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಧಿಕಾರಿಗಳ ಭರವಸೆಯ ನಡುವೆಯೂ ರೈತ ಮರದಿಂದ ಕೆಳಗಿಳಿಯಲು ನಿರಾಕರಿಸಿ, ತಮ್ಮ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಪಟ್ಟು ಹಿಡಿದರು.
ರೈತ ನಾಗರಾಜ್ ಹಾಗೂ ಅವರ ಸಹವರ್ತಿಗಳ ಮಾಹಿತಿ ಪ್ರಕಾರ, ರಾಮಿನಕೊಪ್ಪ ಗ್ರಾಮದ ಸರ್ವೇ ನಂ. 57ರಲ್ಲಿರುವ ಜಮೀನಿನಲ್ಲಿ ಸುಮಾರು 25 ವರ್ಷಗಳಿಗೂ ಹಿಂದಿನಿಂದ 28 ಕುಟುಂಬಗಳು ತಲಾ ನಾಲ್ಕು ಎಕರೆ ಜಮೀನಿನಂತೆ ಸಾಗುವಳಿ ಮಾಡಿಕೊಂಡು ಬರುತ್ತಿವೆ. ಈ ಕುಟುಂಬಗಳಿಗೆ ಹಿಂದೆ ಸರಕಾರದಿಂದ ಜಮೀನು ಮಂಜೂರಾಗಿತ್ತು. ಆದರೆ, ಒಟ್ಟು ಫಲಾನುಭವಿಗಳ ಪೈಕಿ 11 ಜನರಿಗೆ ಮಾತ್ರ ಮಂಜೂರಾತಿ ಮುಂದುವರಿದಿದ್ದು, ಉಳಿದವರ ಮಂಜೂರಾತಿ ರದ್ದಾಗಿತ್ತು ಎಂದು ತಿಳಿಸಿದರು.
ನಂತರ 11 ಜನರ ಹೆಸರಿನಲ್ಲಿದ್ದ ಮಂಜೂರಾತಿಯನ್ನೂ ಉಪವಿಭಾಗಾಧಿಕಾರಿಗಳು ರದ್ದುಪಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಫಲಾನುಭವಿಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಪ್ರಸ್ತಾವದಲ್ಲಿ ವಿವರಿಸಿರುವ ಅಂಶಗಳನ್ನು ಪುರಸ್ಕರಿಸಿ, ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಎಲ್.ಎನ್.ಡಿ.ಸಿ.ಆರ್. 173/2024ರ ದಿನಾಂಕ 16-12-2024ರ ಆದೇಶವನ್ನು ತಿರಸ್ಕರಿಸಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಹಿತಾಸಕ್ತರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದರು ಎಂದು ರೈತರು ವಿವರಿಸಿದರು.
ಜಿಲ್ಲಾಧಿಕಾರಿ ಆದೇಶದ ಬಳಿಕವೂ ತಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಹಲವು ವರ್ಷಗಳಿಂದ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದರೂ ಪಹಣಿ ಹಾಗೂ ಖಾತೆ ಬದಲಾವಣೆ ಮಾಡಿಕೊಡದೆ ವಿಳಂಬ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಒಟ್ಟು 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಡಲಾಗಿತ್ತು. ಅದರಂತೆ ಫಲಾನುಭವಿಗಳೆಲ್ಲರೂ ಹಂತ ಹಂತವಾಗಿ ಹಣ ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿ ಬಾರಿ ಕಚೇರಿಗೆ ತೆರಳಿದಾಗಲೂ ಅಧಿಕಾರಿಗಳು ವಿವಿಧ ಕಾರಣಗಳನ್ನು ಮುಂದಿಟ್ಟು ಕೆಲಸವನ್ನು ಮುಂದೂಡುತ್ತಿದ್ದರು. ಮಂಗಳವಾರ ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿದಾಗ, ತನಗೆ ವರ್ಗಾವಣೆಯಾಗಿದ್ದು, ಇನ್ನು ಮುಂದೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹೊಸ ಅಧಿಕಾರಿಗಳು ಬಂದ ಬಳಿಕ ಅವರೊಂದಿಗೆ ಮಾತನಾಡಿ ಕೆಲಸ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ತಿಳಿಸಿದ್ದಾರೆ ಎಂದು ರೈತರು ಆರೋಪಿಸಿದರು.
ನಾವು ವಿನಯದಿಂದ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬದಲಾಗಿ ಧಮ್ಕಿ ಹಾಕುತ್ತಿದ್ದಾರೆ. ನಮ್ಮ ಜಮೀನಿನ ಖಾತೆ ಮಾಡಿಕೊಡಿ. ಇಲ್ಲವಾದರೆ ನಮಗೆ ಸಾಮೂಹಿಕವಾಗಿ ವಿಷ ಕೊಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ತೀವ್ರ ಬೇಸರಗೊಂಡಿದ್ದ ರೈತ ನಾಗರಾಜ್, ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಮರ ಏರಿ, ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ. ಮೊದಲು ನಮ್ಮ ಕೆಲಸ ಮಾಡಿಕೊಡಿ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮೈತ್ರಿ ಅವರು ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೂ ನಾಗರಾಜ್ ಮರದಿಂದ ಕೆಳಗಿಳಿಯಲು ನಿರಾಕರಿಸಿದರು. ಬಳಿಕ ಉಪವಿಭಾಗಾಧಿಕಾರಿಗಳು ಕೆಳಗಿದ್ದ ಇತರ ರೈತರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು. ಸ್ಥಳದಲ್ಲಿ ಸಾರ್ವಜನಿಕರು, ಪೊಲೀಸರು ಹಾಗೂ ಅಗಿ ್ನಶಾಮಕ ದಳದ ಸಿಬ್ಬಂದಿ ಜಮಾಯಿಸಿ ರೈತನನ್ನು ಮನವೊಲಿಸಿ ಕೆಳಗಿಳಿಸಲು ಪ್ರಯತ್ನಿಸಿದರು. ಮಧ್ಯಾಹ್ನ 2 ಗಂಟೆಯವರೆಗೂ ಈ ಹೈಡ್ರಾಮಾ ಮುಂದುವರಿದಿತ್ತು.
ವಿಳಂಬ ನೀತಿಗೆ ರೈತರ ಆಕ್ರೋಶ: ಸರ್ವೇ ನಂಬರ್ 57ರ ವ್ಯಾಪ್ತಿಯ ಫಲಾನುಭವಿಗಳು ಹಾಗೂ ಅವರ ಸಂಬಂಧಿಕರು ಸ್ಥಳದಲ್ಲಿ ಜಮಾಯಿಸಿ ಜಿಲ್ಲಾಡಳಿತ, ತಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ವಿಳಂಬ ನೀತಿಯಿಂದಾಗಿ ಅನೇಕರು ಕಚೇರಿಗಳಿಗೆ ಅಲೆದಾಡಿ ಮಾನಸಿಕವಾಗಿ ನೊಂದಿದ್ದಾರೆ. ಇದೇ ಸಮಸ್ಯೆಯಿಂದಾಗಿ ನಮ್ಮ ಸಮುದಾಯದ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಆದರೂ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.






