ಶಿವಮೊಗ್ಗ: ಯುವತಿಯ ಮೊಬೈಲ್ ಫೋನ್ ಎಗರಿಸಿ ಮರವೇರಿದ ಮಂಗ!
ಮೊಬೈಲ್ ಮರಳಿ ಪಡೆಯಲು ನಡೆಯಿತು ಒಂದು ಗಂಟೆಯ ಹರಸಾಹಸ: ಬಾಳೆಹಣ್ಣಿನ ಆಸೆಗೆ ಸಿಕ್ತು ಮೊಬೈಲ್!

ಶಿವಮೊಗ್ಗ, ಜೂ.11: ಯುವತಿಯೊಬ್ಬಳ ಮೊಬೈಲ್ ಫೋನ್ ಎಗರಿಸಿದ ಮಂಗವೊಂದು ಮರವೇರಿ ಕುಳಿತ ಘಟನೆ ಶಿವಮೊಗ್ಗದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಯುವತಿ ತನ್ನ ಮೊಬೈಲ್ ಅನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು. ಆ ವೇಳೆ ಮಂಗವೊಂದು ಕಿಟಕಿಯ ಪಕ್ಕದಲ್ಲಿದ್ದ ಮೊಬೈಲನ್ನು ತೆಗೆದುಕೊಂಡು ಆಸ್ಪತ್ರೆಯ ಪಕ್ಕದಲ್ಲಿದ್ದ ದೊಡ್ಡ ಮರವನ್ನೇರಿ ಕುಳಿತಿದೆ.
ಮಂಗ ಆಗಾಗ ಮೊಬೈಲನ್ನು ಎದೆಗೆ ಅವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್ ಕಿವಿಗೆ ಹಿಡಿದು ಕುಳಿತಿತ್ತು.
ಇದನ್ನು ಗಮನಿಸಿದ ಜನರು ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್ ಪಡೆಯುವ ಪ್ರಯತ್ನವನ್ನು ಮಾಡಿದರು. ಆದರೆ ಮಂಗ ಮೊಬೈಲ್ನ್ನು ಗಟ್ಟಿಯಾಗಿಯೇ ಹಿಡಿದು ಅಲ್ಲೇ ಕುಳಿತಿತ್ತು. ಹೀಗೆ ಸುಮಾರು ಒಂದು ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್ ಗೆ ಕರೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್ ಹಿಂಪಡೆಯುವ ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಚೇಷ್ಟೆ ಮಾಡುತ್ತಿತ್ತು. ಅಷ್ಟರಲ್ಲಿ ಇದನ್ನು ನೋಡಲು ರಸ್ತೆಯಲ್ಲಿ ಹಲವಾರು ಜನ ಕೂಡಾ ಸೇರಿದ್ದರು. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಸಹ ಆಯಿತು. ಜನರ ಗುಂಪನ್ನು ನೋಡಿ ಭಯಭೀತಗೊಂಡ ಮಂಗ ಮರದಿಂದ ಕೆಳಗೆ ಬರಲೇ ಇಲ್ಲ. ಕೊನೆಗೆ ಮಂಗ ಬಾಳೆಹಣ್ಣನ್ನು ನೊಡಿ ಆಸ್ಪತ್ರೆಯ ಸ್ಲ್ಯಾಬ್ ಮೇಲೆ ಬಂದಿತು. ಆಗ ಯುವಕರು ಪಟಾಕಿ ಸಿಡಿಸಿದರು. ಇದರಿಂದ ಬೆದರಿದ ಮಂಗ ಮೊಬೈಲ್ ಅನ್ನು ಅಲ್ಲೇ ಬಿಟ್ಟು ಬಾಳೆಹಣ್ಣು ತೆಗೆದುಕೊಂಡು ಓಡಿ ಹೋಯಿತು.