ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಅಂತರ್ ರಾಜ್ಯ ಕಳ್ಳನ ಕಾಲಿಗೆ ಗುಂಡೇಟು

ಶಿವಮೊಗ್ಗ: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ ಅಂತರ್ ರಾಜ್ಯ ಕಳ್ಳನ ಕಾಲಿಗೆ ಪೊಲೀಸರು ಗುಂಡೇಟು ಮಾಡಿರುವ ಘಟನೆ ಶುಕ್ರವಾರ ಬಸವನಗಂಗೂರು ಬಳಿ ನಡೆದಿದೆ.
ಬೆಂಗಳೂರಿನ ಕಲ್ಕೆರೆ ನಿವಾಸಿ ಕಲ್ಕೆರೆ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜ(47)ಎಂಬಾತ ಗುಂಡೇಟಿಗೊಳಗಾದ ಆರೋಪಿ.
ಕಳ್ಳತನಕ್ಕಾಗಿ ಶಿವಮೊಗ್ಗ ನಗರದಲ್ಲಿ ಮುರ್ನಾಲ್ಕು ದಿನಗಳಿಂದ ಮಂಜ ಓಡಾಡುತ್ತಿದ್ದ ಬಗ್ಗೆ ಜಯನಗರ ಠಾಣೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಜಯನಗರ ಠಾಣೆ ಪಿಎಸ್ ಐ ನವೀನ್ ಬ್ಯಾಕೋಡು ನೇತೃತ್ವದಲ್ಲಿ ಸಿಬ್ಬಂದಿಗಳು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ದ್ಯಾಮಪ್ಪನ ಮೇಲೆ ಚಾಕುವಿನಿಂದ ಆರೋಪಿ ಮಂಜುನಾಥ್ ಹಲ್ಲೆ ನಡೆಸಿದ್ದಾನೆ.
ಪಿಎಸ್ಐ ನವೀನ್ ಬ್ಯಾಕೋಡು ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದರೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಮಂಜನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಚಿಕಿತ್ಸೆಗಾಗಿ ಆರೋಪಿ ಮಂಜನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಯನಗರ ಹಾಗೂ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.