ಶಿವಮೊಗ್ಗ | ದೀವರ ಸಾಂಸ್ಕೃತಿಕ ವ್ರೆಭವಕ್ಕೆ ಚಾಲನೆ

ಶಿವಮೊಗ್ಗ, ಡಿ.21: ಧೀರ ದೀವರ ಬಳಗ ಹಾಗೂ ಹಳೇಪೈಕ ದೀವರ ಸಂಸ್ಕೃತಿ ಬಳಗದಿಂದ ನಗರದ ಈಡಿಗರ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ದೀವರ ಸಾಂಸ್ಕೃತಿಕ ವೈಭವ-2025 ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿರಬೇಕು. ಸಮಾಜದ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಸೆ ಚಿತ್ತಾರ ದೀವರ ಅಸ್ಮಿತೆಯಾಗಿದೆ. ಸಮಾಜದ ಸಹಕಾರದಿಂದ ನಾವೆಲ್ಲರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ. ಇದನ್ನು ಮರೆಯಲು ಸಾಧ್ಯವಿಲ್ಲ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಜನಾರ್ದನ ಪೂಜಾರಿಯಂತಹ ನಾಯಕರು ಸಮಾಜದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅವರೆಲ್ಲರನ್ನೂ ನಾವೆಲ್ಲ ಸ್ಮರಿಸಬೇಕೆಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರು ಅತಂತ್ರರಾಗಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ಸಚಿವ ಮಧು ಬಂಗಾರಪ್ಪನವರು ವಿಧಾನ ಸೌಧದಲ್ಲಿ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ಹಕ್ಕು ಕೊಡಲು ನಿರ್ಧರಿಸಿದ್ದಾರೆ. ಸರ್ವೇ ಕಾರ್ಯ ಆಗಿದೆ. ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಬಾಕಿ ಉಳಿದ ರೈತರಿಗೂ ಹಕ್ಕುಪತ್ರ ನೀಡಲಾಗುವುದು ಎಂದರು.
ಕುವೆಂಪು ವಿವಿ ಹಣಕಾಸು ಅಧಿಕಾರಿ ಎಚ್.ಎನ್.ರಮೇಶ್ ಮಾತನಾಡಿದರು. ಸಾರಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೊಳೆಯಪ್ಪ, ಧೀರ ದೀವರು ಬಳಗದ ಪ್ರಮುಖರಾದ ನಾಗರಾಜ್ ನೇರಿಗೆ ಹಾಗೂ ಶ್ರೀಧರ್ ಈಡೂರು, ಸುರೇಶ್ ಬಾಳೇಗುಂಡಿ ಮತ್ತಿತರರು ಇದ್ದರು.
ಸಂಘಟನೆಯಿಂದ ಕಲೆ, ಸಂಸ್ಕೃತಿ ಉಳಿಯಲು ಸಾಧ್ಯ: ಕವಿರಾಜ್
ಶಿವಮೊಗ್ಗ: ಪ್ರಬಲ ಜಾತಿಗಳ ಮುಂದೆ ಸಣ್ಣಪುಟ್ಟ ಸಮುದಾಯಗಳು ಸಂಘಟಿತರಾಗಬೇಕಾದ ಅನಿವಾರ್ಯ ಇದೆ ಎಂದು ಚಲನಚಿತ್ರ ನಿರ್ದೇಶಕ ಮತ್ತು ಗೀತ ರಚನೆಕಾರ ಕವಿರಾಜ್ ಹೇಳಿದ್ದಾರೆ.
ಈಡಿಗರ ಭವನದಲ್ಲಿ ಆಯೋಜಿಸಲಾಗಿದ್ದ ದೀವರ ಸಾಂಸ್ಕೃತಿಕ ವೈಭವ-2025 ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆ ಎನ್ನುವುದು ರಾಜಕೀಯ ಪ್ರಾಶಸ್ತ್ಯ ಪಡೆಯುವುದಕ್ಕೂ, ಯಾವುದೇ ಹುದ್ದೆ ಪಡೆಯವುದಕ್ಕೆ ಸಂಬಂಧಪಟ್ಟಿದ್ದಲ್ಲ. ಒಂದು ಪಂಗಡವಾಗಿ, ಸಮುದಾಯವಾಗಿ, ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬಲಪಡಿಸುವುದಕ್ಕಾಗಿ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.
ನಟ ವಿಜಯರಾಘವೇಂದ್ರ ಮಾತನಾಡಿ, ನಮ್ಮ ಪರಂಪರೆ, ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವು ಸಂಭ್ರಮದಿಂದ ಆಚರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಿದೆ ಎಂದರು.
ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಮಾತನಾಡಿದರು. ಧೀರ ದೀವರು ಬಳಗದ ಪ್ರಮುಖರಾದ ನಾಗರಾಜ್ ನೇರಿಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಿಗಂದೂರು ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿಕುಮಾರ್, ಡಾ.ರಾಜನಂದಿನಿ ಕಾಗೊಡು, ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗ ಮಹಿಳಾ ಸಂಘದ ಗೌರವ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಡಿವೈಎಸ್ಪಿ ಪರಮೇಶ್ವರ ಶಿರವಾಳ, ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಬ್ರಹ್ಮಶ್ರೀ ನಾರಾಯಣ ಗುರು ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಮೂರ್ತಿ ಹಾಗೂ ಸುರೇಶ್ ಕೆ. ಬಾಳೆಗುಂಡಿ ಉಪಸ್ಥಿತರಿದ್ದರು.
ಮೇಳೈಸಿದ ದೀವರ ಸಾಂಸ್ಕೃತಿಕ ಕಲರವ
ನಗರದ ಈಡಿಗರ ಭವನದಲ್ಲಿ ಇಡೀ ದಿನ ಕಳ್ಳು-ಬಳ್ಳಿಗಳ ಅನುಬಂಧದ ಕಲರವ ದೀವರ ಸಾಂಸ್ಕೃತಿಕ ವೈಭವದ ಹೆಸರಲ್ಲಿ ಗರಿಗೆದರಿತ್ತು. ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಸೇರಿ ನಡೆಸಿದ ಈ ಹಬ್ಬದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದ ಈಡಿಗ ಸಮುದಾಯದ ಪ್ರತಿನಿಧಿಗಳು ದಿನವಿಡೀ ನಕ್ಕು, ನಲಿದು ಸಂಭ್ರಮಿಸಿದರು. ದೀವರ ಸಾಂಸ್ಕೃತಿಕ ವೈಭವದ ಕುರುಹುಗಳಾದ ಡೊಳ್ಳು, ಕೋಲಾಟ, ಅಂಟಿಕೆ-ಪಿಂಟಿಕೆ, ಸಂಪ್ರದಾಯದ ಹಾಡುಗಳು ಅನುರಣಿಸಿದವು.
ಧೀರ ದೀವರು ಪ್ರಶಸ್ತಿ ಪ್ರದಾನ
ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಧೀರ ದೀವರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಸೆ ಚಿತ್ತಾರ ಕಲಾವಿದೆ ಗೌರಮ್ಮ ಹುಚ್ಚಪ್ಪ ಮಾಸ್ತರ್, ಶಿರಸಿಯ ಸಮಾಜ ಸೇವಕ ಸಿ.ಎಫ್.ನಾಯ್ಕ ಮಾಳಂಜಿ ಹಾಗೂ ಸಸ್ಯತಜ್ಞ ಎಂ.ಬಿ.ನಾಯ್ಕ್ ಕಡಕೇರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.







