Shivamogga | ಮರಗಳನ್ನು ಕಡಿದವರ ವಿರುದ್ಧ ಕ್ರಮಕ್ಕೆ ಅರಣ್ಯ ಇಲಾಖೆಗೆ ಸೂಚನೆ ನೀಡುವ ಬದಲು ಅಬಕಾರಿ ಇಲಾಖೆಗೆ ಪತ್ರ ಬರೆದ ಜಿಲ್ಲಾಡಳಿತ !
ಮಂಗನ ಕಾಟಕ್ಕೂ ಅಬಕಾರಿ ಇಲಾಖೆಗೆ ಸೂಚನೆ!

ಸಾಂದರ್ಭಿಕ ಚಿತ್ರ | Photo credit : AI chatgpt
ಶಿವಮೊಗ್ಗ: ನಗರದ ಸೈನ್ಸ್ ಫೀಲ್ಡ್ನಲ್ಲಿ ಮರಗಳನ್ನು ಕಡಿದು ಹಾಕಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಜಿಲ್ಲಾಡಳಿತ ಸೂಚನೆ ನೀಡಿರುವುದು ಹಾಸ್ಯಾಸ್ಪದಕ್ಕೆ ಕಾರಣವಾಗಿದೆ.
ಸೈನ್ಸ್ ಫೀಲ್ಡ್ನಲ್ಲಿ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿ ಸ್ವೀಕರಿಸಿದ ಜಿಲ್ಲಾಡಳಿತ, ಮರ ಕಡಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ. ಜಿಲ್ಲಾಡಳಿತದ ಈ ನಡೆಯನ್ನು ನಾಗರಿಕ ಹಿತರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ.
ವಾಸ್ತವವಾಗಿ, ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಬೇಕಿದ್ದ ಜಿಲ್ಲಾಡಳಿತ ಅಬಕಾರಿ ಇಲಾಖೆಗೆ ಪತ್ರ ಬರೆದಿರುವುದು ಹಾಸ್ಯಾಸ್ಪದವಾಗಿದೆ ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಮಂಗನ ಕಾಟಕ್ಕೂ ಅಬಕಾರಿ ಇಲಾಖೆಗೆ ಸೂಚನೆ! :
ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ನಿವಾಸಿ ಪ್ರವೀಣ ಬಿ.ಎಲ್. ಅವರು ನಗರದ ಅಂಚೆ ಕಚೇರಿ ಪ್ರದೇಶದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಗೂ ಜಿಲ್ಲಾಡಳಿತವು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ.
ಒಟ್ಟಿನಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯ ಎಡವಟ್ಟಿನಿಂದಾಗಿ ಜಿಲ್ಲಾಡಳಿತ ಮುಜುಗರಕ್ಕೀಡಾಗುವಂತಾಗಿದೆ.






