SHIVAMOGGA | ಬ್ಯಾರೀಸ್ ಸಿಟಿ ಸೆಂಟರ್ ನಿಂದ ಸಾಲುಮರದ ತಿಮ್ಮಕ್ಕ ನೆನಪಿನಲ್ಲಿ ‘ಗ್ರೀನ್ ರನ್ 2025’ ಮ್ಯಾರಥಾನ್

ಶಿವಮೊಗ್ಗ: ಮುಂಜಾನೆಯ ಚುಮುಚುಮು ಚಳಿಯ ನಡುವೆ ನಗರದ ಬ್ಯಾರೀಸ್ ಸಿಟಿ ಸೆಂಟರ್ ವತಿಯಿಂದ ಸಾಲುಮರದ ತಿಮ್ಮಕ್ಕ ನೆನಪಿನಲ್ಲಿ ರವಿವಾರ ಆಯೋಜಿಸಿದ್ದ ಮೂರನೇ ವರ್ಷದ ‘ಗ್ರೀನ್ ರನ್-2025’ ಮ್ಯಾರಥಾನ್ ಓಟದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳು, ಹಿರಿಯರು ಭಾಗವಹಿಸಿ ಹಸಿರು ಪ್ರೇಮ ಮೆರೆದರು.
ಬ್ಯಾರೀಸ್ ಸಿಟಿ ಸೆಂಟರ್ ನವರು ಪ್ರತೀ ವರ್ಷವೂ ಹಸಿರು ಓಟ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು, ಈ ವರ್ಷವೂ ಸಾಲುಮರದ ತಿಮ್ಮಕ್ಕ ನೆನಪಲ್ಲಿ ಸುಮಾರು ಐದು ಕಿ.ಮೀ. ಮ್ಯಾರಥಾನ್ ಓಟವನ್ನು ಏರ್ಪಡಿಸಿತ್ತು. ಈ ಓಟವು ಬಿ.ಎಚ್. ರಸ್ತೆಯಲ್ಲಿರುವ ಬ್ಯಾರೀಸ್ ಸಿಟಿ ಸೆಂಟರ್ ಮುಂಭಾಗದಿಂದ ಆರಂಭಗೊಂಡು ಕರ್ನಾಟಕ ಸಂಘ, ಡಿವಿಎಸ್ ಸರ್ಕಲ್, ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕೀಸ್, ದುರ್ಗಿಗುಡಿ, ನೆಹರೂ ರಸ್ತೆ ಮೂಲಕ ಸಾಗಿ ಬ್ಯಾರೀಸ್ ಅಂಗಳ ತಲುಪಿತು.
ಓಟದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಟೀ ಶರ್ಟ್ ಅನ್ನು ಉಚಿತವಾಗಿ ನೀಡಲಾಯಿತು. ಅಲ್ಲದೇ, ಕ್ರಮವಾಗಿ ಐದು ಸಾವಿರ ರೂ., ಮೂರು ಸಾವಿರ ರೂ., ಎರಡು ಸಾವಿರ ರೂ. ನಗದು ಬಹುಮಾನಗಳನ್ನು ಮೊದಲು ಬಂದ ಮೂವರಿಗೆ ನೀಡಲಾಯಿತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಹಸಿರು ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಯಾರೀಸ್ ಸಿಟಿ ಸೆಂಟರ್ ನ ರೀಟೆಲ್ ಹೆಡ್ ಕೆ. ನಂದಕುಮಾರ್, ಹಸಿರೇ ನಮ್ಮ ಉಸಿರು. ಮುಂದಿನ ಪೀಳಿಗೆಗೂ ಹಸಿರನ್ನು ಉಳಿಸಬೇಕು. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಗ್ರೀನ್ ರನ್ ಏರ್ಪಡಿಸಲಾಗಿದೆ ಎಂದರು.
ಬ್ಯಾರೀಸ್ ಸಂಸ್ಥೆಯ ಮತ್ತೋರ್ವ ಮುಖ್ಯಸ್ಥೆ ಆಯಿಶ ಅಂಜುಂ ಮಾತನಾಡಿ, ಸಾಲುಮರದ ತಿಮ್ಮಕ್ಕ ನಿಜವಾದ ಪರಿಸರ ಪ್ರೇಮಿಯಾಗಿದ್ದರು. ಅವರ ನೆನಪಿಗಾಗಿ ಬ್ಯಾರೀಸ್ ಸಿಟಿ ಸೆಂಟರ್ ನಿಂದ ಸಾವಿರ ಸಸಿಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಿಟಿ ಸೆಂಟರ್ ನ ಮ್ಯಾನೇಜರ್ ಮೊಯ್ದಿನ್, ಪ್ರಮುಖರಾದ ಇಸ್ಮಾಯೀಲ್ ಕುಟ್ಟಿ, ಮುಹಮ್ಮದ್ ಮುಜೀರ್, ಶಶಿಕುಮಾರ್, ಶ್ರೀನಿವಾಸ ಮೂರ್ತಿ ಇದ್ದರು.
ಪೆಸಿಟ್ ಕಾಲೇಜಿನ ಪ್ರಾಧ್ಯಾಪಕಿ ದೀಕ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







