ಶಿವಮೊಗ್ಗ: ಬಿರುಗಾಳಿ ಸಹಿತ ಮಳೆ; ರೈಲ್ವೆ ಹಳಿಗೆ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತ

ಶಿವಮೊಗ್ಗ: ಬಿರುಗಾಳಿ ಸಹಿತ ಮಳೆಗೆ ಶಿವಮೊಗ್ಗ - ಭದ್ರಾವತಿ ಬಿದಿರೆ ಸಮೀಪ ರೈಲ್ವೆ ಹಳಿಗೆ ಮರ ಉರುಳಿ ಬಿದ್ದು ಗಂಟೆಗಟ್ಟಲೇ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾದ ಘಟನೆ ರವಿವಾರ ಸಂಜೆ ನಡೆದಿದೆ.
ಶಿವಮೊಗ್ಗ–ಭದ್ರಾವತಿ ನಡುವಿನ 57ನೇ ರೈಲ್ವೆ ಕಿಲೋಮೀಟರ್ ಪ್ರದೇಶದಲ್ಲಿ ಮರ ಉರುಳಿ ಬಿದ್ದ ಪರಿಣಾಮ ರೈಲ್ವೆ ವಿದ್ಯುತ್ ಲೈನ್ ತುಂಡಾಗಿದ್ದು, ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಬಳಿಕ ರೈಲನ್ನು ಮರುಕಳಿಸಿ ಶಿವಮೊಗ್ಗಕ್ಕೆ ಕರೆತರಲಾಯಿತು ಎಂದು ತಿಳಿದು ಬಂದಿದೆ.
ಬೆಂಗಳೂರು–ಶಿವಮೊಗ್ಗ ಜನಶತಾಬ್ದಿ ರೈಲು ರಾತ್ರಿ 9 ಗಂಟೆಗೆ ತರೀಕೆರೆಗೆ ತಲುಪಿದರೂ, ತಾಂತ್ರಿಕ ದುರಸ್ತಿಯ ಹಿನ್ನೆಲೆಯಲ್ಲಿ ರಾತ್ರಿ 10:17ರವರೆಗೆ ಅಲ್ಲೇ ನಿಲ್ಲಿಸಲಾಯಿತು. ಮೈಸೂರು–ಶಿವಮೊಗ್ಗ ಕುವೆಂಪು ಎಕ್ಸ್‌ಪ್ರೆಸ್ ರೈಲು ಮಸರಹಳ್ಳಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಿಲುಗಡೆಗೊಂಡಿತ್ತು.
ಇದೇ ವೇಳೆ ಬೆಂಗಳೂರು–ಶಿವಮೊಗ್ಗ–ತಾಳಗುಪ್ಪ ಇಂಟರ್‌ಸಿಟಿ ರೈಲನ್ನೂ ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8:27ಕ್ಕೆ ಭದ್ರಾವತಿಗೆ ಆಗಮಿಸಿದ್ದ ರೈಲು ಬಳಿಕ ರಾತ್ರಿ 10:09ಕ್ಕೆ ಹೊರಟು 10:25ಕ್ಕೆ ಶಿವಮೊಗ್ಗ ತಲುಪಿತು.
ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿತು. ಆದರೆ, ಹಲವು ಗಂಟೆಗಳ ಕಾಲ ರೈಲಿನಲ್ಲೇ ಸಿಲುಕಿಕೊಂಡ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದರು.






