ಶಿವಮೊಗ್ಗ : ಭದ್ರಾ ಡ್ಯಾಮ್ ನಲ್ಲಿ ಹೆಚ್ಚಿದ ನೀರಿನ ಹರಿವು; ಪ್ರವಾಹದ ಭೀತಿ
39.017 ಕ್ಯೂಸೆಕ್ ನೀರು ನದಿಗೆ ಬಿಡುಗಡೆ

ಶಿವಮೊಗ್ಗ : ಭದ್ರಾ ಡ್ಯಾಮ್‌ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅಷ್ಟೇ ಪ್ರಮಾಣದ ನೀರು ಹೊರಗಡೆ ಬಿಡಲಾಗುತ್ತಿದೆ. ಭದ್ರಾ ಜಲಾನಯನ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಡ್ಯಾಮ್‌ಗೆ 39,017 ಕ್ಯೂಸೆಕ್ ಒಳಹರಿವಿದೆ. ಇನ್ನು ಹೊರ ಹರಿವು ಇಷ್ಟೇ ಪ್ರಮಾಣದಲ್ಲಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಭದ್ರಾ ಡ್ಯಾಮ್ ಭರ್ತಿಗೆ ಇನ್ನು ಕೇವಲ 5.4 ಅಡಿ ನೀರು ಮಾತ್ರ ಬೇಕಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರಾ ಡ್ಯಾಮ್ ಅಧಿಕಾರಿಗಳು ಎಷ್ಟು ಒಳಹರಿವು ಬರುತ್ತಿದೆಯೋ ಅಷ್ಟೇ ಪ್ರಮಾಣದ ನೀರು ಹೊರಗಡೆ ಹರಿಸುತ್ತಿದ್ದು, ಪ್ರವಾಹದ ಭೀತಿ ಶುರುವಾಗಿದೆ. ಮಳೆ ಕುಂಠಿತವಾಗದಿದ್ದರೆ ಇನ್ನೂ ಹೆಚ್ಚಿನ ನೀರು ಜಲಾಶಯದಿಂದ ಹೊರಗಡೆ ಬಿಡಲಾಗುತ್ತಿದ್ದು, ಭದ್ರಾ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಜಲಾಶಯದ ಇಂದಿನ ನೀರಿನ ಮಟ್ಟ 180.6 ಅಡಿ ಇದ್ದು ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಮ್ ನೀರಿನ ಮಟ್ಟ 174.3 ಅಡಿ ಇತ್ತು. ಈ ವರ್ಷ ಆರು ಅಡಿಗಿಂತಗೂ ಹೆಚ್ಚು ಸಂಗ್ರಹವಾಗಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುನ್ನೆಚ್ಚರಿಕಾ ಅಷ್ಟೇ ಪ್ರಮಾಣದಲ್ಲಿ ನೀರು ಹೊರಗಡೆ ಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 186 ಇದ್ದು ಭದ್ರಾ ಡ್ಯಾಮ್ ಭರ್ತಿಗೆ ಕ್ಷಣಗಣನೆ ಶುರುವಾಗಿದೆ. ಡ್ಯಾಮ್ ಭರ್ತಿಗೆ ಇನ್ನು ಕೇವಲ 5.4 ಅಡಿ ನೀರು ಬೇಕು. ಜಲಾಶಯಕ್ಕೆ ಇಂದು 39,017 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ವರ್ಷವೂ ಡ್ಯಾಮ್ ಭರ್ತಿಯಾಗಲಿದ್ದು, ಭದ್ರಾ ಅಚ್ಚುಕಟ್ಟುದಾರ ಮತ್ತು ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ ಜಿಲ್ಲೆಗಳ ರೈತರು ಮತ್ತು ಜನರ ಸಂತಸಕ್ಕೆ ಕಾರಣವಾಗಿದೆ.
ಭದ್ರಾ ಡ್ಯಾಮ್ ಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಜುಲೈ ಅಂತ್ಯದಲ್ಲಿ ಅತಿ ಹೆಚ್ಚು ನೀರು ಹರಿದು ಬಂದಿದೆ. ಹೆಚ್ಚು ಕಡಿಮೆ ಭದ್ರಾ ಡ್ಯಾಮ್ ತುಂಬಿದಂತಾಗಿದೆ.







