Shivamogga | ಲಿಂಗನಮಕ್ಕಿ ಹಿನ್ನೀರಿನ ಮಟ್ಟ ಕುಸಿತ : ಹಲ್ಕೆ–ಮುಪ್ಪಾನೆ ಲಾಂಚ್ ಸೇವೆ ಇಂದಿನಿಂದ ಸ್ಥಗಿತ

ಸಾಂದರ್ಭಿಕ ಚಿತ್ರ | Photo credit : AI
ಶಿವಮೊಗ್ಗ: ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಇಂದಿನಿಂದ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹಾಗೂ ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಪ್ರಮುಖ ಜಲಮಾರ್ಗ ಇದಾಗಿದ್ದು, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಜೂನ್ 2ರಿಂದ ಸೇವೆ ಸ್ಥಗಿತಗೊಳಿಸಿರುವುದಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಿಳಿಸಿದೆ.
ಶರಾವತಿ ಹಿನ್ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನೊಳಗಿನ ಮರದ ಕಾಂಡಗಳು ಲಾಂಚ್ಗೆ ತಾಗುವ ಅಪಾಯ ಎದುರಾಗಿದೆ. ಜೊತೆಗೆ ವಾಹನ ಇಳಿಸುವ ಪ್ಲಾಟ್ಫಾರ್ಮ್ ಪ್ರದೇಶದಲ್ಲಿ ಲಾಂಚ್ನ ಅಡಿಭಾಗ ನೆಲಕ್ಕೆ ತಾಗುತ್ತಿರುವ ಕಾರಣ ಸೇವೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಗಂದೂರು ಸೇತುವೆ ನಿರ್ಮಾಣವಾದ ಬಳಿಕವೂ ಕರೂರು ಹೋಬಳಿಗೆ ಮುಪ್ಪಾನೆ ಮಾರ್ಗ ಪ್ರಮುಖ ಸಂಪರ್ಕ ವ್ಯವಸ್ಥೆಯಾಗಿತ್ತು. ಕರೂರು ಹೋಬಳಿಯ ಪೊಲೀಸ್ ಠಾಣೆ ಮತ್ತು ಮೆಸ್ಕಾಂ ಕಚೇರಿಗಳು ಕಾರ್ಗಲ್–ಜೋಗ ಭಾಗದಲ್ಲಿರುವುದರಿಂದ ಗ್ಯಾಸ್ ಸಿಲಿಂಡರ್ ಸೇರಿದಂತೆ ವಿವಿಧ ಅಗತ್ಯ ಕೆಲಸಗಳಿಗೆ ತುಮರಿ, ಸಿಗಂದೂರು ಹಾಗೂ ಭಾರಂಗಿ ಭಾಗದ ಜನರು ಇದೇ ಮಾರ್ಗವನ್ನು ಅವಲಂಬಿಸುತ್ತಿದ್ದರು.
ಇದೇ ಮಾರ್ಗವನ್ನು ಶಿರಸಿ–ಸಿದ್ದಾಪುರ ಭಾಗದ ಜನರು ಸಿಗಂದೂರಿಗೆ ತೆರಳಲು ಹೆಚ್ಚಾಗಿ ಬಳಸುತ್ತಿದ್ದರು.
ಮಳೆ ಹೆಚ್ಚಾಗಿ ಜಲಾಶಯದ ನೀರಿನ ಮಟ್ಟ ಏರಿದ ಬಳಿಕ ಲಾಂಚ್ ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.






