ಶಿವಮೊಗ್ಗ | ಬಾರ್ ನಲ್ಲಿ ಅಪಮಾನ ಆರೋಪ: ವ್ಯಕ್ತಿ ಆತ್ಮಹತ್ಯೆ

ಶಿವಮೊಗ್ಗ: ಮದ್ಯಪಾನ ಮಾಡಿ ಸಾವಿರಾರು ರೂ. ಸಾಲ ಮಾಡಿದ್ದ ಕಾರಣಕ್ಕೆ ಬಾರ್ ಕ್ಯಾಷಿಯರ್ ಹಲ್ಲೆ ನಡೆಸಿದ್ದರಿಂದ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಹಿಳೆಯೊಬ್ಬರು ನೀಡಿದ್ದು, ತನಗೆ ಬಾರ್ ಕ್ಯಾಷಿಯರ್ ಕರೆ ಮಾಡಿ, ನಿನ್ನ ಗಂಡ ಕಂಠಪೂರ್ತಿ ಕುಡಿದು 35 ಸಾವಿರ ರೂ. ವರೆಗೆ ಸಾಲ ಮಾಡಿದ್ದಾನೆ. ಈ ಕಾರಣಕ್ಕೆ ಆತನನ್ನು ಬಾರ್ ನಿಂದ ಹೊರಗೆ ಹಾಕಿದ್ದಲ್ಲದೆ, ಆತನ ಬೈಕ್ ಅನ್ನು ಇಟ್ಟುಕೊಂಡಿದ್ದೇವೆ. ಬಂದು ಆತನನ್ನು ಕರೆದುಕೊಂಡು ಹೋಗು' ಎಂದು ಹೇಳಿದ್ದಾರೆ.
ದೂರುದಾರ ಮಹಿಳೆ ತನ್ನ ಮಕ್ಕಳನ್ನು ಕಳುಹಿಸಿ ಪತಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮಾರನೇ ದಿನ ಈ ವಿಚಾರದ ಬಗ್ಗೆ ಪತಿಯಲ್ಲಿ ಕೇಳಿದಾಗ, ತಾನು ಅತಿಯಾಗಿ ಕುಡಿದಿರಲಿಲ್ಲ. ಅಲ್ಲದೆ ಎಂಟು ಸಾವಿರ ರೂ. ಮಾತ್ರ ಸಾಲ ಮಾಡಿದ್ದೇನೆ, ಆದರೂ ಬಾರ್ ಕ್ಯಾಷಿಯರ್ ಹಾಗೂ ಮಾಲಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ತನ್ನ ಬೈಕ್ ಕೊಡದೆ ಅಪಮಾನ ಮಾಡಿದ್ದಾರೆ ಎಂದು ಬೇಸರಿಸಿದ್ದರು. ಬಳಿಕ ದೂರುದಾರ ಮಹಿಳೆ ತನ್ನ ಕಿವಿಯೋಲೆ ಅಡವಿಟ್ಟು 20 ಸಾವಿರ ರೂ. ಸಾಲ ತೀರಿಸಿ ಬಾರ್ನಲ್ಲಿದ್ದ ಬೈಕ್ ಬಿಡಿಸಿಕೊಂಡು ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ತನ್ನ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾರ್ ನಲ್ಲಿ ಆಗಿರುವ ಅಪಮಾನದಿಂದಲೇ ಅವರು ಸಾವನ್ನಪ್ಪಿದ್ದು, ಈ ಸಾವಿಗೆ ಬಾರ್ನ ಕ್ಯಾಷಿಯರ್ ಹಾಗೆಯೇ ಮಾಲಕ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






