ಶಿವಮೊಗ್ಗ | ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ; ಇಬ್ಬರ ರಕ್ಷಣೆ, ಮತ್ತಿಬ್ಬರು ನೀರುಪಾಲು

ಶಿವಮೊಗ್ಗ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಇಲ್ಲಿನ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸೂರು ಮೂಲದ ಭವಾನಿ (23) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎಂದು ಗುರುತಿಸಲಾಗಿದೆ.
ಘಟನೆಯನ್ನು ಕಂಡ ತಕ್ಷಣ ಸ್ಥಳೀಯ ಯುವಕರಾದ ನವೀನ್ ಹಾಗೂ ದಾದಾಪೀರ್ ಎಂಬವರು ಜೀವದ ಹಂಗು ತೊರೆದು ನದಿಗೆ ಧುಮುಕಿ, ತಾಯಿ ಮತ್ತು 11 ತಿಂಗಳ ಮಗುವನ್ನು ಸಾಹಸಪೂರ್ವಕವಾಗಿ ರಕ್ಷಿಸಿದ್ದಾರೆ. ಆದರೆ, ಇನ್ನಿಬ್ಬರು ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಸಾಜಿಕಾ (6) ಮತ್ತು ತನ್ವಿಕಾ (4) ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ತಾಯಿ ಮತ್ತು 11 ತಿಂಗಳ ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಚುರುಕುಗೊಂಡ ಶೋಧ ಕಾರ್ಯ:
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಜಿಕಾ ಮತ್ತು ತನ್ವಿಕಾ ಪತ್ತೆಗಾಗಿ ಮುಳುಗು ತಜ್ಞರ ತಂಡದಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಮಹಿಳೆ ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.






