ಶಿವಮೊಗ್ಗ| ಖಾಸಗಿ ಬಸ್ ಢಿಕ್ಕಿ ನವವಿವಾಹಿತ ಮೃತ್ಯು; ಮೂವರಿಗೆ ಗಾಯ

ಶಿವಮೊಗ್ಗ: ಖಾಸಗಿ ಬಸ್ ಢಿಕ್ಕಿಯಾಗಿ ನವ ವಿವಾಹಿತ ಮೃತಪಟ್ಟಿರುವ ಘಟನೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ರವಿವಾರ ರಾತ್ರಿ ನಡೆದಿದೆ.
ಶಾಂತಿ ನಗರದ ನಿವಾಸಿ ಅಹ್ಮದ್ (31) ಮೃತ ಯುವಕ. ಅಲ್ಲದೆ, ಮೂವರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಗಿಗುಡ್ಡ ಕಡೆಯಿಂದ ಬಂದ ಖಾಸಗಿ ಬಸ್ ಮಣ್ಣಿನ ದಿಬ್ಬ ಹಾರಿ ಅಡ್ಡಾದಿಡ್ಡಿ ಚಲಿಸಿದ್ದು, ಮೂರು ದ್ವಿಚಕ್ರ ವಾಹನಗಳು, ನಾಲ್ವರು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ಗಳು ಜಖಂಗೊಂಡಿದ್ದರೆ, ಪೊಲೀಸ್ ಬ್ಯಾರಿಕೇಡ್ ತುಂಡಾಗಿದೆ. ಫುಟ್‌ಪಾತ್‌ಗೆ ಅಳವಡಿಸಿದ್ದ ರೇಲಿಂಗ್ ಕೂಡ ಹಾನಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಸದ್ಯ ಪರ್ಯಾಯ ಮಾರ್ಗದಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಮೇಲ್ಸೇತುವೆ ಮುಂಭಾಗ ಮಣ್ಣಿನ ಗುಡ್ಡೆ ಹಾಕಲಾಗಿದ್ದು, ದ್ವಿಚಕ್ರ ವಾಹನಗಳು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಹಾಗಿದ್ದೂ ಬಸ್ ಈ ಮಾರ್ಗದಲ್ಲಿ ಬಂದು ಅಪಘಾತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯ ಜನರು ಘಟನಾ ಸ್ಥಳದಲ್ಲಿ ಗುಂಪುಗೂಡಿದ್ದರು. ಕೆಲವು ಬಸ್ಸಿನ ಗಾಜಿಗೆ ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ.







