Shivamogga | ಸುತ್ತುಕೋಟೆ ಬಳಿ ಬಸ್ಸು-ಬೈಕ್ ನಡುವೆ ಅಪಘಾತ: ಓರ್ವ ಸಾವು

ಶಿವಮೊಗ್ಗ: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಘಟನೆಯಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲೂಕು ಸುತ್ತುಕೋಟೆಯ ಪೆಟ್ರೋಲ್ ಬಂಕ್ ಮುಂಭಾಗ ನಡೆದಿದೆ.
ಮೃತನನ್ನು ಅಬ್ನಾನ್ (23) ಎಂದು ಗುರುತಿಸಲಾಗಿದೆ.
ಕೆಎಸ್ಸಾರ್ಟಿಸಿ ಬಸ್ ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬೈಕಿನಲ್ಲಿದ್ದವರು ಶಿವಮೊಗ್ಗ ಕಡೆಯಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು. ಸುತ್ತುಕೋಟೆಯ ಪೆಟ್ರೋಲ್ ಬಂಕ್ ಸಮೀಪ ಬೈಕ್ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಅಬ್ನಾನ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ.
ಬಸ್ಸಿನಲ್ಲಿ ಬೆಂಕಿ:
ಬೈಕು ನೇರವಾಗಿ ಬಸ್ಸಿನ ರೇಡಿಯೇಟರ್ ಭಾಗಕ್ಕೆ ಗುದ್ದಿದ ಪರಿಣಾಮ ಬೈಕ್ ಸಿಕ್ಕಿಹಾಕಿಕೊಂಡು ಬೆಂಕಿ ಹೊತ್ತಿಕೊಂಡಿದೆ.
ಬಸ್ಸಿನಲ್ಲಿ ತಕ್ಷಣ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನಲ್ಲಿದ್ದವರು ಆತಂಕಕ್ಕೆ ಒಳಗಾಗಿ ಬಸ್ಸಿನ ಎಮರ್ಜೆನ್ಸಿ ಡೋರ್, ಕಿಟಕಿಗಳಿಂದ ಹೊರಗೆ ಜಿಗಿದಿದ್ದಾರೆ.
ಘಟನೆಯಿಂದಾಗಿ ಸವಳಂಗ ರಸ್ತೆಯಲ್ಲಿ ಕೆಲ ನಿಮಿಷ ವಾಹನ ಸಂಚಾರ ಸ್ಥಗಿತವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಸಂಜೀವ್ ಕುಮಾರ್, ಕುಂಸಿ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.






