ಶಿವಮೊಗ್ಗ|ಖಾಸಗಿ ಬಸ್ - ಆಟೋ ಢಿಕ್ಕಿ: ಯುವಕ ಮೃತ್ಯು; ಮೂವರಿಗೆ ಗಂಭೀರ ಗಾಯ

ಶಿವಮೊಗ್ಗ : ಖಾಸಗಿ ಬಸ್ ಹಾಗೂ ಆಟೋ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ಯುವಕ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರಾಸ್ ಬಳಿ ನಡೆದಿದೆ.
ಶಿವಮೊಗ್ಗದ ಬುದ್ಧನಗರದ ನಿವಾಸಿ ಪ್ರೇಮ್ ಕುಮಾರ್ (24) ಅಪಘಾತದಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಆಟೋದಲ್ಲಿದ್ದ ಮನೋಜ್ (21), ಪವನ್ (21) ಹಾಗೂ ಗಿರೀಶ್ (21) ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪ್ರಯಾಣಿಕರಿದ್ದ ಆಟೋ ಶಿವಮೊಗ್ಗದಿಂದ ಸಕ್ರೇಬೈಲು ಕಡೆಗೆ ತೆರಳುತಿತ್ತು. ಈ ವೇಳೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story




