ಶಿವಮೊಗ್ಗ: ರಸ್ತೆ ಅಪಘಾತ; ಲೈನ್ ಮ್ಯಾನ್ ಮೃತ್ಯು

ಶಿವಮೊಗ್ಗ: ಭೀಕರ ರಸ್ತೆ ಅಪಘಾತದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಓರ್ವರು ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಆಯನೂರು ಸಮೀಪದ ನಯಾರ ಪೆಟ್ರೋಲ್ ಬಂಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕುಂಸಿ ಮೆಸ್ಕಾಂ ಉಪ ವಿಭಾಗದ ಹಾರ್ನಳ್ಳಿ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತಿರುಮಲೇಶ್ ರೆಡ್ಡಿ (30) ಗುರುತಿಸಲಾಗಿದೆ. ಇವರು ಮೂಲತಃ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯವರಾಗಿದ್ದು, ಹಾರನಹಳ್ಳಿಯಲ್ಲಿ ವಾಸವಾಗಿದ್ದರು.
ತಡರಾತ್ರಿ ಮೈಸವಳ್ಳಿ, ವೀರಣ್ಣನಬೆನವಳ್ಳಿ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಿತ್ತು. ಮಾಹಿತಿ ಮೇರೆಗೆ ತಿರುಮಲೇಶ್ ರೆಡ್ಡಿ ಅವರು ಬೈಕ್ ನಲ್ಲಿ ಸ್ಥಳಕ್ಕೆ ತೆರಳಿದ್ದರು. ನಂತರ ಮನೆಗೆ ಹಿಂದಿರುಗುತ್ತಿದ್ಧಾಗ ಸರಿಸುಮಾರು 2 ಗಂಟೆ ಆಸುಪಾಸಿನಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ತಿರುಮಲೇಶ್ ರೆಡ್ಡಿ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




