ಶಿವಮೊಗ್ಗ | ರಸ್ತೆ ಸಮಸ್ಯೆ: ವೃದ್ಧೆಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಾಟ

ಶಿವಮೊಗ್ಗ: ರಸ್ತೆ ಸಂಪರ್ಕ ಇಲ್ಲದ ಕಾರಣ ಅನಾರೋಗ್ಯಪೀಡಿತ ಓರ್ವ ವೃದ್ಧೆಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತುಕೊಂಡೇ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಜೂ.1ರಂದು ಗ್ರಾಮಸ್ಥರು ಅನಾರೋಗ್ಯಪೀಡಿತ 90 ವರ್ಷದ ಕಲ್ಯಾಣಮ್ಮ ಎಂಬವರನ್ನು ಆಸ್ಪತ್ರೆಗೆ ಸಾಗಿಸಲು ಅವರ ಮನೆಮಂದಿ ಪರದಾಡುವಂತಾಗಿತ್ತು. ಬಳಿಕ ಅವರನ್ನು ಕುರ್ಚಿಯಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕಾಡ್ಗೇರಿ ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿದೆ. ಈ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲ. ಇಲ್ಲಿ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು, ವಯೋವೃದ್ಧರನ್ನು ಹೊರಗೆ ಕರೆದೊಯ್ಯಲು ಗ್ರಾಮಸ್ಥರು ಭಾರೀ ಸಾಹಸವೇ ಮಾಡಬೇಕಾಗುತ್ತದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡೇ ಹೋಗಿ ಆಸ್ಪತ್ರೆಗೆ ದಾಖಲಿಸುವುದು ಇಲ್ಲಿ ಮಾಮೂಲಿಯಾಗಿದೆ. ಇದೀಗ, 90 ವರ್ಷದ ಕಲ್ಯಾಣಮ್ಮ ಎಂಬುವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನೂ ಕೂಡ ಗ್ರಾಮಸ್ಥರು ಕುರ್ಚಿಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.