Shivamogga | ಶರಾವತಿ ಜಲವಿದ್ಯುದಾಗರದಲ್ಲಿ ಪೈಪ್ ಲಿಕೇಜ್: ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸ್ಥಗಿತ

ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯದ ಶರಾವತಿ ಜಲವಿದ್ಯುದಾಗರದ 7ನೇ ಘಟಕದ ದುರಸ್ತಿಗಾಗಿ ಗುರುವಾರ ಘಟಕವನ್ನು ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಪೆನ್‌ಸ್ಟಾಕ್ ಪೈಪ್‌ಗಳ ನೀರನ್ನು ಹೊರಹರಿಸುವ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭಾರಿ ಪ್ರಮಾಣದ ನೀರು ಸೋರಿಕೆಯಾಗಿ ಜಲವಿದ್ಯುದಾಗರದ ಒಳಭಾಗದಲ್ಲಿ ನೀರು ಶೇಖರಣೆಗೊಂಡಿದ್ದು,ಅಧಿಕಾರಿಗಳು-ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.
ಜಲವಿದ್ಯುದಾಗರದ ಹಿಂಭಾಗದಲ್ಲಿರುವ ಪೆನ್‌ಸ್ಟಾಕ್ ಪೈಪ್‌ಗಳ ಬಳಿ ನೀರು ಸೋರಿ ಜಲವಿದ್ಯುದಾಗರದ ನೆಲಮಾಳಿಗೆಯಲ್ಲಿ ನೀರು ತುಂಬಿ ಆತಂಕದ ಸ್ಥಿತಿ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶರಾವತಿ ವಿದ್ಯುದಾಗಾರದ ಘಟಕ–7 ರ ಬಟರ್‌ಫ್ಲೈ ವಾಲ್ವ್ ನವೀಕರಣದ ತಾಂತ್ರಿಕ ಕೆಲಸಗಳು ಪ್ರಗತಿಯಲ್ಲಿದ್ದವು. ಈ ಪ್ರಕ್ರಿಯೆಯ ಭಾಗವಾಗಿ ಪೆನ್‌ಸ್ಟಾಕ್ ಕೊಳವೆಯಲ್ಲಿದ್ದ ನೀರನ್ನು ಖಾಲಿ ಮಾಡಲು ಅಳವಡಿಸಲಾಗಿದ್ದ ಡ್ರೈನ್ ಮಾರ್ಗದಲ್ಲಿ ನೀರು ಹರಿಯುತ್ತಿತ್ತು. ಆದರೆ, ಈ ಹಳೆಯದಾದ ಡ್ರೈನ್ ಪೈಪ್‌ನಲ್ಲಿ ಹಠಾತ್ ಸೋರಿಕೆ ಉಂಟಾದ ಪರಿಣಾಮ, ಭಾರಿ ಪ್ರಮಾಣದ ನೀರು ವಿದ್ಯುದಾಗಾರದ ಆವರಣದ ಮೂಲಕ ಟರ್ಬೈನ್ ಮಾಳಿಗೆಯ ಕಡೆಗೆ ನುಗ್ಗಿದೆ ಎನ್ನಲಾಗಿದೆ.
ಶರಾವತಿಯಿಂದ ಕರ್ನಾಟಕ ವಿದ್ಯುತ್ ಜಾಲಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು 9 ಪ್ರಮುಖ ಮಾರ್ಗಗಳಿವೆ. ಈ ಪೈಕಿ ಶರಾವತಿ–ಶಿವಮೊಗ್ಗದ 3ನೇ ಮಾರ್ಗವು ಈಗಾಗಲೇ ಮುಂಚಿತವಾಗಿಯೇ ತಾಂತ್ರಿಕ ನಿರ್ವಹಣೆಯಲ್ಲಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಉಳಿದ 8 ಮಾರ್ಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ, ಇಡೀ ರಾಜ್ಯದ ವಿದ್ಯುತ್ ಜಾಲಕ್ಕೆ ಯಾವುದೇ ರೀತಿಯ ವ್ಯತ್ಯಯವಾಗಲಿ ಅಥವಾ ತೊಂದರೆಯಾಗಲಿ ಉಂಟಾಗಿಲ್ಲ.
ಜೂನ್ 25, 2026 ರಂದು ಮಧ್ಯಾಹ್ನ ಸುಮಾರು 1:45 ರ ವೇಳೆಗೆ ಈ ನೀರಿನ ಸೋರಿಕೆ ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ನೌಕರರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಆ ಸಮಯದಲ್ಲಿ ಚಾಲನೆಯಲ್ಲಿದ್ದ ಘಟಕ 1, 8 ಮತ್ತು 9 ರ ವಿದ್ಯುತ್ ಉತ್ಪಾದನೆಯನ್ನು ತಕ್ಷಣವೇ ಸ್ಥಗಿತಗೊಳಿಸಿದರು.
ತಕ್ಷಣವೇ ಎಚ್ಚೆತ್ತುಕೊಂಡ ತಾಂತ್ರಿಕ ಅಧಿಕಾರಿಗಳು ಮತ್ತು ನೌಕರರು ಕಾರ್ಯಾಚರಣೆ ನಡೆಸಿ ನೀರಿನ ಹರಿವನ್ನು ಯಶಸ್ವಿಯಾಗಿ ತಡೆಗಟ್ಟಿದ್ದಾರೆ. ತದನಂತರ ಇಡೀ ವಿದ್ಯುದಾಗಾರವನ್ನು ಸುರಕ್ಷಿತವಾಗಿ ನಿರ್ವಹಣೆ ಮಾಡಿ, ಪ್ರತಿ ಘಟಕದ ತಾಂತ್ರಿಕ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಎಲ್ಲವೂ ಸುಸ್ಥಿತಿಯಲ್ಲಿರುವುದು ಖಾತರಿಯಾದ ನಂತರ ಹಂತ ಹಂತವಾಗಿ ಎಲ್ಲಾ ಘಟಕಗಳನ್ನು ಪುನಃ ಚಾಲನೆಗೊಳಿಸಲಾಗಿದೆ.
ಈ ಘಟನೆಯ ಕುರಿತು ಕರ್ನಾಟಕ ವಿದ್ಯುತ್ ಕಾರ್ಪೊರೇಷನ್ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಬೆಂಗಳೂರಿನ ಲೋಡ್ ಡಿಸ್‌ಪ್ಯಾಚಿಂಗ್ ಕೇಂದ್ರದ ಗಮನಕ್ಕೆ ತಂದು, ನಿರಂತರ ಸಮನ್ವಯ ಸಾಧಿಸುವ ಮೂಲಕ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗದಂತೆ ಕರ್ತವ್ಯ ನಿರ್ವಹಿಸಲಾಗಿದೆ ಎಂದು ಶರಾವತಿ ಚಾಲನೆ ಮತ್ತು ಪಾಲನೆ ವಿಭಾಗದ ಮುಖ್ಯ ಅಭಿಯಂತರರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.






