ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ಸರ್ಕಾರ ನಿರ್ಧಾರ: ಟೆಂಡರ್ ಆಹ್ವಾನ

PC: x.com/ANI
ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಸಂಸ್ಥೆ (ಎಫ್.ಟಿ.ಓ) ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಇಲ್ಲಿ 100 ಪೈಲೆಟ್ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ.
ಶಿವಮೊಗ್ಗದಲ್ಲಿ ವೈಮಾನಿಕ ತರಬೇತಿ (ಎಫ್.ಟಿ.ಓ) ಸಂಸ್ಥೆ ಆರಂಭಕ್ಕೆ ಅನುಭವಿ ಖಾಸಗಿ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಬಿಡ್ದಾರರು ಇಲ್ಲಿ ಎಫ್.ಟಿ.ಓ ನಿರ್ಮಿಸಿ, 20 ವರ್ಷ ನಿರ್ವಹಣೆ ಮಾಡಬೇಕು. ಆದರೆ ಇದಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು ಷರತ್ತು ವಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಅÃನದ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ನಿರ್ವಹಣೆ ಮಾಡುತ್ತಿದೆ. ಇದೇ ಸಂಸ್ಥೆ ಈಗ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ಟೆಂಡರ್ ಆಹ್ವಾನಿಸಿದೆ. ರಾಜ್ಯದಲ್ಲಿ ವೈಮಾನಿಕ ಸೌಲಭ್ಯ ವಿಸ್ತರಿಸುವುದು ಇದರ ಗುರಿ.
ತರಬೇತಿ ಸಂಸ್ಥೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ಜಾಗದಲ್ಲಿ 3500 ಚದರ ಮೀಟರ್ ಜಾಗ ನೀಡಲಾಗುತ್ತದೆ. ಈ ಪೈಕಿ 1500 ಚದರ ಮೀಟರ್ ಜಾಗ ಟರ್ಮಿನಲ್ ಪಕ್ಕದಲ್ಲಿರುವ ಹ್ಯಾಂಗರ್ ಸಮೀಪದಲ್ಲಿ ನೀಡಲಾಗುತ್ತದೆ. 2000 ಚದರ ಮೀಟರ್ ಜಾಗವನ್ನು ಟರ್ಮಿನಲ್ನ ಹೊರ ಭಾಗದಲ್ಲಿ ನೀಡಲಾಗುತ್ತಿದೆ. ಇಲ್ಲಿ ಕ್ಲಾಸ್ರೂಂ, ಸಿಮುಲೇಟರ್ ವಿಭಾಗ, ಗ್ರಂಥಾಲಯ, ರೇಡಿಯೋ ಟೆಲಿಫೋನಿ ತರಬೇತಿ, ಟೆಸ್ಟಿಂಗ್ ರೂಮ್, ಕಚೇರಿಗಳು ಸೇರಿದ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.
ಕೆಎಸ್ಐಐಡಿಸಿ ಸಂಸ್ಥೆಯು ಫೈರ್ ಸೇಫ್ಟಿ, ಆಂಬುಲೆನ್ಸ್ ಸೌಲಭ್ಯ, ಏರ್ ಟ್ರಾಫಿಕ್ ಕಂಟ್ರೋಲ್, ರನ್ ವೇ ನಿರ್ವಹಣೆ ಮಾಡಲಿದೆ. ತರಬೇತಿ ಸಂಸ್ಥೆ ಆರಂಭಿಸುವ ಏಜೆನ್ಸಿಯು ತನ್ನ ವ್ಯಾಪ್ತಿಯ ವಿದ್ಯುತ್ ಬಿಲ್, ಸೆಕ್ಯೂರಿಟಿ ಸೇರಿದಂತೆ ವಿವಿಧ ನಿರ್ವಹಣೆಗಳನ್ನು ತಾನೆ ಮಾಡಿಕೊಳ್ಳಬೇಕು. ಅಲ್ಲದೆ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ನಾಗರಿಕ ವಿಮಾನಯಾನ ಇಲಾಖೆ ಸೂಚಿಸಿರುವ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಪ್ರತಿ ಚದರ ಮೀಟರ್ಗೆ ವಾರ್ಷಿಕ 650 ರೂ.ಗಳನ್ನು ಕೆಎಸ್ಐಐಡಿಸಿಗೆ ಏಜೆನ್ಸಿಯು ಪಾವತಿಸಬೇಕು. ಪ್ರತಿ ಮೂರು ವರ್ಷಕ್ಕೆ ಈ ದರ ಶೇ.15ರಷ್ಟು ಹೆಚ್ಚಳವಾಗಲಿದೆ. ವಿಮಾನ ನಿಲ್ದಾಣ ಮತ್ತು ರನ್ವೇ ಬಳಕೆ ಮಾಡಿಕೊಳ್ಳುವಾಗ ಕೆಎಸ್ಐಐಡಿಸಿಯೊಂದಿಗೆ ಮಾಹಿತಿ ಪಡೆಯಬೇಕು. ದೈನಂದಿನ ಕಾರ್ಯಾಚರಣೆ, ಸರ್ಕಾರದ ವಿಮಾನಗಳು, ವಿವಿಐಪಿ ವಿಮಾನಗಳಿಗೆ ಮೊದಲ ಆದ್ಯತೆ ನೀಡಬೇಕು. ತರಬೇತಿ ಸಂಸ್ಥೆ ಕಾರ್ಯಾರಂಭ ಮಾಡಿದ ಮೂರು ತಿಂಗಳ ಒಳಗೆ ಮೂರು ವಿಮಾನಗಳನ್ನು ಹೊಂದಿಸಿಕೊಳ್ಳಬೇಕು. ಡಿಜಿಸಿಎ ನಿಯಮದಂತೆ ಒಂದು ವರ್ಷದೊಂದಿಗೆ ಮತ್ತಷ್ಟು ವಿಮಾನಗಳನ್ನು ಹೊಂದಬೇಕು.
ವಿಮಾನಯಾನ ನಿರ್ದೇಶನಾಲಯದ ಅನುಮತಿಯೊಂದಿಗೆ ದೇಶಾದ್ಯಂತ ಈಗಾಗಲೆ 38 ವಿಮಾನಯಾನ ತರಬೇತಿ ಸಂಸ್ಥೆಗಳಿವೆ. ಬೆಂಗಳೂರಿನ ಜಕ್ಕೂರಿನಲ್ಲಿ ಸರ್ಕಾರದ ತರಬೇತಿ ಸಂಸ್ಥೆ ಇದೆ. ಆದರೆ 2023ರಿಂದ ಇದು ಕಾರ್ಯನಿರ್ವಹಿಸುತ್ತಿಲ್ಲ. ಕಲಬುರಗಿ, ಮೈಸೂರು ಮತ್ತು ಬೆಳಗಾವಿ ವಿಮಾನ ನಿಲ್ದಣಗಳಲ್ಲಿ ಖಾಸಗಿ ಸಂಸ್ಥೆಗಳು ತರಬೇತಿ ಸಂಸ್ಥೆಗಳನ್ನು ನಡೆಸುತ್ತಿವೆ.
ಕನ್ನಡಿಗರಿಗೆ ಆದ್ಯತೆ
ತರಬೇತಿ ಸಂಸ್ಥೆಯಲ್ಲಿ ಕನ್ನಡಿಗರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದೆ. ತರಬೇತಿಗೆ ಆಯ್ಕೆ ಮಾಡುವಾಗ ಶೇ.25ರಷ್ಟು ಸೀಟುಗಳನ್ನು ಕನ್ನಡಿಗರು ಮತ್ತು ಮಹಿಳೆಯರಿಗೆ ಮೀಸಲಿಡಬೇಕು. ಇವರಿಗೆ ಶುಲ್ಕ ವಿನಾಯಿತಿ ನೀಡಬೇಕು. ಏಜೆನ್ಸಿಯೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪರಿಶೀಲನೆಗೆ ಕೆಎಸ್ಐಐಡಿಸಿಗೆ ಪಟ್ಟಿ ರವಾನಿಸಬೇಕು ಎಂದು ಸೂಚಿಸಲಾಗಿದೆ.
ಪ್ರತಿ ವರ್ಷ 100 ಮಂದಿಗೆ ತರಬೇತಿ ನೀಡುವ ಗುರಿ ಇದೆ. ತರಬೇತಿ ಸಂಸ್ಥೆ ಆರಂಭವಾದ ಮೊದಲ ವರ್ಷ 50 ಅಭ್ಯರ್ಥಿಗಳನ್ನು ದಾಖಲು ಮಾಡಲಾಗುತ್ತದೆ. ಮೂರನೇ ವರ್ಷದ ಹೊತ್ತಿಗೆ 100 ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.