ಶಿವಮೊಗ್ಗ | ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ: ಪತ್ನಿ, ಪ್ರಿಯಕರನಿಗೆ ಮರಣದಂಡನೆ

ಎಸ್. ಲಕ್ಷ್ಮಿ | ಕೃಷ್ಣಮೂರ್ತಿ | ಶಿವರಾಜ್
ಶಿವಮೊಗ್ಗ: ಒಂಭತ್ತು ವರ್ಷಗಳ ಹಿಂದೆ ಭದ್ರಾವತಿಯಲ್ಲಿ ನಡೆದ ಸರಕಾರಿ ಶಾಲೆಯ ಶಿಕ್ಷಕ ಇಮ್ತಿಯಾಝ್ ಅಹ್ಮದ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಮೃತರ ಪತ್ನಿ ಮತ್ತು ಪ್ರಿಯಕರನಿಗೆ ಮರಣದಂಡನೆ ವಿಧಿಸಿ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಶಿಕ್ಷಕಿ ಎಸ್. ಲಕ್ಷ್ಮಿ(29) ಹಾಗೂ ಆಕೆಯ ಪ್ರಿಯಕರ ಕೃಷ್ಣಮೂರ್ತಿ(30) ಮರಣದಂಡನೆಗೆ ಒಳಗಾದ ಆರೋಪಿಗಳು. ಈ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ನೆರವಾದ ಎ3 ಆರೋಪಿ ಶಿವರಾಜ್(32) ಎಂಬಾತನಿಗೆ ಏಳು ವರ್ಷ ಶಿಕ್ಷೆಯ ಜೊತೆಗೆ ದಂಡ ವಿಧಿಸಿದೆ.
2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ ಶಿಕ್ಷಕ ಇಮ್ತಿಯಾಝ್ ಅಹ್ಮದ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ನೈಲಾನ್ ದಾರದಲ್ಲಿ ಕಟ್ಟಿ ಭದ್ರಾವತಿಯ ಹೊಸ ಸೇತುವೆ ಸಮೀಪ ಭದ್ರಾ ನದಿಯಲ್ಲಿ ಎಸೆಯಲಾಗಿತ್ತು.
ಪ್ರಕರಣದ ಹಿನ್ನೆಲೆ:
ಮೂಲತಃ ಭದ್ರಾವತಿಯ ಜನ್ನಾಪುರದ ನಿವಾಸಿಯಾಗಿರುವ ಲಕ್ಷ್ಮಿ 2011ರಲ್ಲಿ ಕಲಬುರಗಿಯಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡಿದ್ದಳು. ಅಲ್ಲಿಯೇ ಶಿಕ್ಷಕರಾಗಿದ್ದ ಇಮ್ತಿಯಾಝ್ ಅಹ್ಮದ್ ರನ್ನು ಪ್ರೀತಿಸಿ ಮದುವೆಯಾಗಿದ್ದಳು. ನಂತರ ಶಿಕ್ಷಕ ದಂಪತಿ ವಾಪಸ್ ಭದ್ರಾವತಿ ತಾಲೂಕಿಗೆ ವರ್ಗಾವಣೆ ಪಡೆದಿದ್ದರು. ಈ ದಂಪತಿಗೆ ಓರ್ವ ಪುತ್ರ ಕೂಡಾ ಇದ್ದಾನೆ.
ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ, ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜೊತೆ ಆತ್ಮೀಯತೆ ಬೆಳೆದಿತ್ತು. ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತೆನ್ನಲಾಗಿದೆ. ಇದನ್ನು ಇಮ್ತಿಯಾಝ್ ವಿರೋಧಿಸಿದ್ದರು. ಈ ಕಾರಣಕ್ಕೆ ಇಮ್ತಿಯಾಝ್ ಅವರನ್ನು ಲಕ್ಷ್ಮೀ, ಆಕೆಯ ಪ್ರಿಯಕರ ಕೃಷ್ಣಮೂರ್ತಿ ಹಾಗೂ ಆತನ ಸ್ನೇಹಿತ ಶಿವರಾಜ ಸೇರಿ 2016ರ ಜುಲೈ 7ರಂದು ಜನ್ನಾಪುರದ ಮನೆಯಲ್ಲಿ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಕೊಲೆ ಮಾಡಿ ಮೃತದೇಹವನ್ನು ಭದ್ರಾ ನದಿಗೆ ಎಸೆದಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು.
ಇಮ್ತಿಯಾಝ್ ಸಹೋದರ ಇಜಾಝ್ ಅಹ್ಮದ್ ದಾಖಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಭದ್ರಾವತಿಯ ನ್ಯೂ ಟೌನ್ ಪೊಲೀಸರು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಶಿವರಾಜನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ನಲ್ಲಿಸಿದ್ದರು.
ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಲಕ್ಷ್ಮಿ ಹಾಗೂ ಕೃಷ್ಣಮೂರ್ತಿಗೆ ಮರಣದಂಡನೆ ಹಾಗೂ ಮತ್ತೊಬ್ಬ ಆರೋಪಿ ಶಿವರಾಜ್ಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಬಿಇಡಿಯಲ್ಲಿ 3ನೇ ರ್ಯಾಂಕ್ ಗಳಿಸಿದ್ದ ಲಕ್ಷ್ಮೀ!
ಪ್ರಕರಣ ನ್ಯಾಯಾಲದಲ್ಲಿ ವಿಚಾರಣೆಯಲ್ಲಿದ್ದ ವೇಳೆ ಜಾಮೀನು ಪಡೆದಿದ್ದ ಲಕ್ಷ್ಮೀ, ಶಿವಮೊಗ್ಗ ತಾಲೂಕಿನ ಸಿರಿಗೆರೆಯ ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. 2025ರ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಡೆಸಿದ ಬಿ.ಇಡಿ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಗಳಿಸಿ ಗಮನ ಸೆಳೆದಿದ್ದಳು.
ಜಿಲ್ಲೆಯಲ್ಲಿ ರಂಗ ಹಾಗೂ ಸಾಂಸ್ಕೃತಿಕ ಚಟುವಟಿಗಳಲ್ಲಿ ಸಕ್ರಿಯಳಾಗಿದ್ದ ಲಕ್ಷ್ಮೀ, ಭರತನಾಟ್ಯ, ಕೂಚಿಪುಡಿ ನೃತ್ಯ ಕಲಾವಿದೆಯಾಗಿದ್ದಳು.







